ADVERTISEMENT

ಪಳನಿಸ್ವಾಮಿಗೆ ಸಿಬಿಐ ಸಂಕಷ್ಟ

ರಸ್ತೆ ಕಾಮಗಾರಿ ಗುತ್ತಿಗೆಯಲ್ಲಿ ಭ್ರಷ್ಟಾಚಾರ l ಮುಖ್ಯಮಂತ್ರಿ ವಿರುದ್ಧ ಆರೋಪ

ಪಿಟಿಐ
Published 12 ಅಕ್ಟೋಬರ್ 2018, 17:24 IST
Last Updated 12 ಅಕ್ಟೋಬರ್ 2018, 17:24 IST
ಎ.ಪಳನಿಸ್ವಾಮಿ
ಎ.ಪಳನಿಸ್ವಾಮಿ   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳ ತನಿಖೆಯನ್ನು ಮದ್ರಾಸ್‌ ಹೈಕೋರ್ಟ್ ಶುಕ್ರವಾರ ಸಿಬಿಐಗೆ ಒಪ್ಪಿಸಿದೆ.

ರಸ್ತೆ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಪಳನಿಸ್ವಾಮಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌. ಭಾರತಿ ಜೂನ್‌ನಲ್ಲಿ ಮದ್ರಾಸ್‌ ಹೈಕೋರ್ಟ್ ಮೊರೆ ಹೋಗಿದ್ದರು.

ಈ ದೂರಿನ ಬಗ್ಗೆ ತನಿಖೆ ನಡೆಸಿದ್ದ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಆದರೆ, ಈ ವರದಿ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

‘ಡಿವಿಎಸಿ ಸಲ್ಲಿಸಿದ ವರದಿ ಬಗ್ಗೆ ಸಮಾಧಾನ ಇಲ್ಲ. ವಾರದ ಒಳಗಾಗಿ ಎಲ್ಲ ದಾಖಲೆ ಮತ್ತು ಕಡತಗಳನ್ನು ಸಿಬಿಐಗೆ ಹಸ್ತಾಂತರಿಸಿ’ ಎಂದು ನ್ಯಾಯಮೂರ್ತಿ ಎ.ಡಿ. ಜಗದೀಶ್ ಚಂದ್ರ ಅವರು ಡಿವಿಎಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮತ್ತು ಪ್ರಕರಣದ ಕುರಿತು ಡಿವಿಎಸಿ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಡಿಎಂಕೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ನಂತರ ತನ್ನ ನಿರ್ಧಾರ ಬದಲಿಸಿದ್ದ ಡಿಎಂಕೆ, ಡಿವಿಎಸಿ ಮುಖ್ಯಮಂತ್ರಿ ಅಧೀನದಲ್ಲಿರುವ ಸಂಸ್ಥೆಯಾದ ಕಾರಣ ಅದರ ತನಿಖೆಯ ಬಗ್ಗೆ ನಂಬುಗೆ ಇಲ್ಲ. ಬೇರೊಂದು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಡಿಎಂಕೆ ಮತ್ತೊಂದು ಅರ್ಜಿ ಸಲ್ಲಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.