ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ ಕೊವ್ಯಾಕ್ಸಿನ್ಗೆ ಕೆಲವು ಷರತ್ತುಗಳ ಜೊತೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಭಾರತೀಯ ಔಷಧ ಮಹಾನಿಯಂತ್ರಕದ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.
ಆಕ್ಸ್ ಫರ್ಡ್ಡ್ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆಗೆ ಅನುಮೋದನೆಗೆ ನೀಡಿದ ನಿರ್ದೇಶನದಂತೆ ಈ ಲಸಿಕೆ ಅನುಮೋದನೆಗೂ ಶಿಫಾರಸು ಮಾಡಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಈ ಲಸಿಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
ಹೈದರಾಬಾದ್ ಮೂಲದ ಔಷಧಿ ಸಂಸ್ಥೆ ಭಾರತ್ ಬಯೋಟೆಕ್ ತಮ್ಮ ಲಸಿಕೆ ಅನುಮೋದನೆಗೆಸಂಬಂಧಿಸಿದ ಹೆಚ್ಚುವರಿ ಮಾಹಿತಿ, ವಿಶ್ಲೇಷಣೆಯನ್ನು ಸಲ್ಲಿಸಿದ ಬಳಿಕ ಶುಕ್ರವಾರ ಮತ್ತೆ ಪರಿಶೀಲನಾ ಸಭೆ ನಡೆಸಿದ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ಕೋವಿಡ್ -19 ತಜ್ಞರ ಸಮಿತಿ (ಎಸ್ಇಸಿ) ಶನಿವಾರ ತುರ್ತು ಬಳಕೆಗೆ ಲಸಿಕೆಗೆ ಅನುಮೋದನೆ ನೀಡುವಂತೆ ಶಿಫಾರಸು ಮಾಡಿದೆ.
ಡಿಸೆಂಬರ್ 7 ರಂದು ಭಾರತ್ ಬಯೋಟೆಕ್ ತನ್ನ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಔಷಧ ಮಹಾನಿಯಂತ್ರಕ(ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿತ್ತು.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಕೋವಿಶೀಲ್ಡ್ನ ತುರ್ತು ಬಳಕೆಗೆ ಅನುಮತಿ ನೀಡುವಂತೆ ಶುಕ್ರವಾರ ತಜ್ಞರ ಸಮಿತಿ ಶಿಫಾರಸು ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.