ADVERTISEMENT

ಚೆಕ್‌ ‘ಮೌಲ್ಯರಹಿತ ಕಾಗದ’ವಲ್ಲ: ‘ಸುಪ್ರೀಂ’

ಪಿಟಿಐ
Published 28 ಅಕ್ಟೋಬರ್ 2021, 21:59 IST
Last Updated 28 ಅಕ್ಟೋಬರ್ 2021, 21:59 IST
   

ನವದೆಹಲಿ: ಹಣಕಾಸು ವಹಿವಾಟಿನ ವೇಳೆ ಭದ್ರತೆಯಾಗಿ ನೀಡಲಾದ ಚೆಕ್‌ ಅನ್ನು ಯಾವುದೇ ಸಂದರ್ಭದಲ್ಲಿ ‘ಮೌಲ್ಯರಹಿತ ಕಾಗದ’ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಭದ್ರತೆ ಎಂಬುದು ನಿಜವಾದ ಅರ್ಥದಲ್ಲಿ ಸುರಕ್ಷತೆಯೇ. ಸಾಲಕ್ಕಾಗಿ ನೀಡಿದ ಭದ್ರತೆಯು ಪಾವತಿಗೆ ಪ್ರತಿಯಾಗಿ ಮಾಡಲಾದ ವಾಗ್ದಾನ. ಚೆಕ್‌ ತಿರಸ್ಕೃತಗೊಂಡಿದೆ ಎಂಬುದನ್ನು ಉದ್ದೇಶಪೂರ್ವಕವಾಗಿ ವಂಚನೆ ಮಾಡುವುದರ ಉದ್ದೇಶ ಎಂದು ಅರ್ಥೈಸಲಾಗದು ಎಂದೂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠವು, ‘ನೀಡಲಾಗಿರುವ, ಠೇವಣಿ ಇರಿಸಲಾದ ಅಥವಾ ಖಾತರಿಯಾಗಿ ನೀಡಲಾದ ಚೆಕ್‌ ಕೆಲ ಉದ್ದೇಶಗಳನ್ನು ಈಡೇರಿಸಲಿದೆ. ಇದಕ್ಕೆ ವಹಿವಾಟಿನಲ್ಲಿ ಭಾಗಿಯಾದ ಉಭಯತ್ರರು ಬದ್ಧರಾಗಿರಬೇಕು’ ಎಂದು ಹೇಳಿತು.

ADVERTISEMENT

ಒಂದು ವೇಳೆ ಹೀಗೇ ನೀಡಲಾದ ಚೆಕ್ ತಿರಸ್ಕೃತಗೊಂಡಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್‌ ಕಾಯ್ದೆಯ ಸೆಕ್ಷನ್‌ 138ರ ಅನುಸಾರ ಅಗತ್ಯ ಕ್ರಮಗಳು ಮುಂದುವರಿಯಲಿವೆ ಎಂದು ಹೇಳಿತು.

ಈ ಸಂಬಂಧ ಜಾರ್ಖಂಡ್‌ ಹೈಕೋರ್ಟ್‌ನ ಡಿ.17, 2019ರ ಆದೇಶವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್‌, ಅದಕ್ಕೆ ಮುನ್ನ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಆದೇಶವನ್ನು ಮರುಸ್ಥಾಪಿಸಿತು.

ದಾಲ್‌ತೊಂಗಾನಿ ನಿವಾಸಿ ಶ್ರೀಪತಿ ಸಿಂಗ್‌ (ನಿಧನರಾಗಿದ್ದಾರೆ) ಅವರು ಹಿತೇಶ್‌ ಕುಮಾರ್‌ ಜೈನ್‌ ಎಂಬವರಿಗೆ ₹ 2 ಕೋಟಿ ಸಾಲ ನೀಡಿದ್ದ ಪ್ರಕರಣಕ್ಕೆಸಂಬಂಧಿಸಿದ್ದಾಗಿತ್ತು. ಶ್ರೀಪತಿ ಸಿಂಗ್‌ ಬದಲಾಗಿ ಅವರ ಪುತ್ರ ಗೌರವ್‌ ಸಿಂಗ್ ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.

ಪಡೆದ ಸಾಲವವನ್ನು ಜೂನ್‌/ಜುಲೈ 2015ರಲ್ಲಿ ಪಾವತಿಸಲಾಗಗುವುದು ಎಂದು ಹೇಳಿದ್ದ ಜೈನ್‌ ಖಾತರಿಯಾಗಿ ₹ 1 ಕೋಟಿಗೆ ಖಾತರಿಯಾಗಿ ಮೂರು ಚೆಕ್‌ ನೀಡಿದ್ದರು. ಬಳಿಕ ಮತ್ತೆ ಮೂರು ಚೆಕ್‌ ನೀಡಿದ್ದರು. ನೀಡಿದ್ದ ಸಮಯಕ್ಕೆ ಸರಿಯಾಗಿ ಸಿಂಗ್ ಅವರು ಚೆಕ್ ಅನ್ನು ಬ್ಯಾಂಕ್‌ಗೆ ನೀಡಿದ್ದರು. ಆದರೆ, ಅದು ತಿರಸ್ಕೃತಗೊಂಡಿತ್ತು.

ಹಣ ನೀಡದಿದ್ದಾಗ ಸಿಂಗ್, ಜೈನ್‌ ವಿರುದ್ಧ ಸ್ಥಳೀಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಜೈನ್ ಹೈಕೋರ್ಟ್‌ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.