ADVERTISEMENT

ಬಾಂಬ್‌ ಬೆದರಿಕೆ: ರಾಹುಲ್‌ಗೆ ಭದ್ರತೆ ನಮ್ಮ ಬದ್ಧತೆ ಎಂದ ಮಧ್ಯಪ್ರದೇಶದ ಗೃಹಸಚಿವ

ಪಿಟಿಐ
Published 19 ನವೆಂಬರ್ 2022, 18:09 IST
Last Updated 19 ನವೆಂಬರ್ 2022, 18:09 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಭೋಪಾಲ್: ‘ಭಾರತ್‌ ಜೋಡೊ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ರಾಜ್ಯದಲ್ಲಿ ಪೂರ್ಣ ಭದ್ರತೆ ಒದಗಿಸಲಾಗುವುದು’ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು.

ಯಾತ್ರೆ ರಾಜ್ಯದಲ್ಲಿ ಹಾದುಹೋಗುವಾಗ ಬಾಂಬ್ ಸ್ಫೋಟಿಸುವ ಬೆದರಿಕೆ ಕುರಿತ ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ‘ಯಾತ್ರೆ ಅವಧಿಯಲ್ಲಿ ಪೂರ್ಣ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಬದ್ಧತೆ ಎಂದಷ್ಟೇ ನಾನು ಭರವಸೆ ನೀಡಲು ಬಯಸುತ್ತೇನೆ’ ಎಂದು ಮಿಶ್ರಾ ಹೇಳಿದರು,

ಭಾರತ್ ಜೋಡೊ ಯಾತ್ರೆ ಅವಧಿಯಲ್ಲಿ ರಾಹುಲ್‌ಗಾಂಧಿ ಮತ್ತು ಇತರರು ನ.28ರ ರಾತ್ರಿ ನಿಗದಿಯಂತೆ ಇಲ್ಲಿನ ಖಾಲ್ಸಾ ಕ್ರೀಡಾಂಗಣದಲ್ಲಿ ವಾಸ್ತವ್ಯ ಹೂಡುವರು. ಆಗ ಬಾಂಬ್‌ ಸ್ಫೋಟಿಸಲಾಗುವುದು ಎಂದು ಬೆದರಿಕೆ ಪತ್ರ ಬಂದಿತ್ತು.

ADVERTISEMENT

1984ರ ಸಿಖ್‌ ವಿರೋಧಿ ಗಲಭೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ರಾಹುಲ್‌ಗಾಂಧಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಕಮಲ್‌ನಾಥ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.

ಗುಜರಾತ್: ರಾಹುಲ್ ರ್‍ಯಾಲಿ ನಾಳೆ
ರಾಜ್‌ಕೋಟ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಲಿದ್ದು, ರಾಜ್‌ಕೋಟ್ ಹಾಗೂ ಸೂರತ್‌ನ ಮಹುವಾದಲ್ಲಿ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ರಾಹುಲ್ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಭಾನುವಾರ ಅಡಿಯಿಡಲಿದೆ. ಮರುದಿನ ಅವರು ಗುಜರಾತ್‌ಗೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.