ADVERTISEMENT

ಏ. 8,9 ರಂದು ಎಐಸಿಸಿ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 15:40 IST
Last Updated 23 ಫೆಬ್ರುವರಿ 2025, 15:40 IST
.
.   

ನವದೆಹಲಿ: ಬಿಜೆಪಿಯ ‘ಜನವಿರೋಧಿ’ ನೀತಿಗಳು ಒಡ್ಡಿರುವ ಸವಾಲುಗಳು ಮತ್ತು ಪಕ್ಷದ ಭವಿಷ್ಯದ ಹಾದಿಯ ಕುರಿತು ಚರ್ಚಿಸಲು ಏಪ್ರಿಲ್ 8 ಮತ್ತು 9ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಐಸಿಸಿ ಅಧಿವೇಶನ ನಡೆಸುವುದಾಗಿ ಕಾಂಗ್ರೆಸ್ ಭಾನುವಾರ ಪ್ರಕಟಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಮುಂಬರುವ ಅಧಿವೇಶನವು ನಿರ್ಣಾಯಕ ಚರ್ಚೆಗಳಿಗೆ ವೇದಿಕೆಯೊದಗಿಸಲಿದೆ. ಮಾತ್ರವಲ್ಲ, ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ದೇಶಕ್ಕೆ ಪರ್ಯಾಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸುತ್ತದೆ’ ಎಂದು ಹೇಳಿದ್ದಾರೆ.

ಏ.8ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ಮರುದಿನ (ಏ.9) ಎಐಸಿಸಿ ಪ್ರತಿನಿಧಿಗಳ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯ ನೇತೃತ್ವ ವಹಿಸಲಿದ್ದು, ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. 

ಎಐಸಿಸಿ ಅಧಿವೇಶನವನ್ನು ಗುಜರಾತ್‌ನಲ್ಲಿ ನಡೆಸುವ ನಿರ್ಧಾರವನ್ನು ಡಿಸೆಂಬರ್ 26ರಂದು ಕರ್ನಾಟಕದ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.

ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ಬಲವನ್ನು ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವ ನಿರ್ಣಾಯಕ ಘಟ್ಟದಲ್ಲಿ ಪಕ್ಷವು ಈ ಅಧಿವೇಶನ ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.