ADVERTISEMENT

ಕೋವಿಡ್‌ ಶಿಷ್ಟಾಚಾರವನ್ನು ಕಾಂಗ್ರೆಸ್‌ ಕಡೆಗಣಿಸುತ್ತಿದೆ: ಅನುರಾಗ್‌ ಠಾಕೂರ್‌

ಪಿಟಿಐ
Published 24 ಡಿಸೆಂಬರ್ 2022, 13:30 IST
Last Updated 24 ಡಿಸೆಂಬರ್ 2022, 13:30 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಿದ ಬೆನ್ನಲ್ಲೇ ಕೋವಿಡ್‌ ಶಿಷ್ಟಾಚಾರವನ್ನು ಪಕ್ಷವು ಕಡೆಗಣಿಸುತ್ತಿರುವುದಾಗಿ ಬಿಜೆಪಿ ದೂರಿದೆ.

ಕೋವಿಡ್‌ ಸೋಂಕು ಪುನಃ ಹೆಚ್ಚಾಗುತ್ತಿರುವ ಸಂದರ್ಭ ಕಾಂಗ್ರೆಸ್‌ ಶಿಷ್ಟಾಚಾರವನ್ನು ಉಲ್ಲಂಘಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಮರೆತಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆಪಾದಿಸಿದ್ದಾರೆ.

ಕಳೆದ ವಾರ ಭಾರತ್‌ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರಿಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಸುಖ್ವಿಂದರ್‌ ಜೊತೆ ಹೆಜ್ಜೆ ಹಾಕಿರುವ ರಾಹುಲ್‌ ಗಾಂಧಿ ಅವರು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡಿದ್ದಾರೆಯೇ ಎಂಬುದು ತಿಳಿಯಬೇಕಿದೆ ಎಂದು ಠಾಕೂರ್‌ ಹೇಳಿದ್ದಾರೆ.

ADVERTISEMENT

'ಕೋವಿಡ್‌ ಪ್ರಕರಣಗಳು ಚೀನಾ ಮತ್ತು ಜಪಾನ್‌ನಲ್ಲಿ ಹೆಚ್ಚುತ್ತಿವೆ. ಆಸ್ಪತ್ರೆಗಳ ಮುಂದೆ ಉದ್ದದ ಸಾಲುಗಳು ಸೇರ್ಪಡೆಗೊಳ್ಳುತ್ತಿವೆ. ಮೃತರ ಸಂಖ್ಯೆಯೂ ವೃದ್ಧಿಸುತ್ತಿದೆ. ಆದರೆ ನೀವು (ರಾಹುಲ್ ಗಾಂಧಿ) ರಾಷ್ಟ್ರದ ಹಿತಾಸಕ್ತಿ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಒಂದು ಕುಟುಂಬದ ಬಗ್ಗೆ ಚಿಂತಿಸುತ್ತಿದ್ದೀರಿ. ಕಾಂಗ್ರೆಸ್‌ ಈ ಧೋರಣೆಯನ್ನು ನಿರಂತರವಾಗಿ ತೋರ್ಪಡಿಸುತ್ತಿದೆ ಎಂದು ಠಾಕೂರ್‌ ವಾಗ್ದಾಳಿ ನಡೆಸಿದ್ದಾರೆ.

ಯಾರಾದರೂ ಒಬ್ಬರು ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರು 'ತುಕ್ಡೆ ತುಕ್ಡೆ ಗ್ಯಾಂಗ್‌'ನ ಸದಸ್ಯರು. ಭಾರತವನ್ನು ವಿಘಟಿಸಲು ಬಯಸುತ್ತಿರುವ ಅಂತಹವರು ಭಾರತವನ್ನು ಒಟ್ಟುಗೂಡಿಸುವ ಬಗ್ಗೆ ಮಾತನಾಡುತ್ತಾರೆ. ದ್ವೇಷದ ಬೀಜವನ್ನು ಬಿತ್ತುವುದಕ್ಕೆ ಹೆಸರಾಗಿರುವವರು ಪ್ರೀತಿಯನ್ನು ಹಂಚುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಠಾಕೂರ್‌ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.