ADVERTISEMENT

ಹವಾಮಾನ ಒಪ್ಪಂದದ ಕರಡು ಪ್ರತಿ: ಭಾರತದ ಪ್ರಸ್ತಾವನೆಗೆ ಸಿಗದ ಮನ್ನಣೆ

ಪಿಟಿಐ
Published 17 ನವೆಂಬರ್ 2022, 16:03 IST
Last Updated 17 ನವೆಂಬರ್ 2022, 16:03 IST

ನವದೆಹಲಿ: ವಿಶ್ವಸಂಸ್ಥೆಯು ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿದ ಮೊದಲ ಅನೌಪಚಾರಿಕ ಕರಡು ಪ್ರತಿಯನ್ನು ಗುರುವಾರ ಪ್ರಕಟಿಸಿದೆ. ಎಲ್ಲಾ ಬಗೆಯ ಪಳೆಯುಳಿಕೆ ಇಂಧನಗಳನ್ನು ತ್ಯಜಿಸುವ ಕುರಿತ ಭಾರತದ ಪ್ರಸ್ತಾವನೆಯನ್ನು ಇದರಲ್ಲಿ ಸೇರ್ಪಡೆ ಮಾಡಿಲ್ಲ.

ಪಳೆಯುಳಿಕೆ ಇಂಧನಗಳು ಮಾಲಿನ್ಯಕ್ಕೆ ದಾರಿ ಮಾಡಿಕೊಡುತ್ತವೆ. ಹೀಗಾಗಿ ಇವುಗಳ ಬಳಕೆ ತಗ್ಗಿಸಬೇಕೆಂದು ಭಾರತವುವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (ಸಿಒಪಿ–27) ಒತ್ತಿ ಹೇಳಿತ್ತು. ಯುರೋಪಿಯನ್‌ ಒಕ್ಕೂಟ ಹಾಗೂ ಇತರ ರಾಷ್ಟ್ರಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದವು.

ದೇಶಗಳ ಅಗತ್ಯತೆ ಹಾಗೂ ಬೇಡಿಕೆಯನ್ನು ಪ್ರತಿಬಿಂಬಿಸುವ ಈ ಕರಡು ಪ್ರತಿಯಲ್ಲಿ, ಕಲ್ಲಿದ್ದಲು ಇಂಧನದ ಮಿತಿಮೀರಿದ ಬಳಕೆಗೆ ಕಡಿವಾಣ ಹಾಕುವ ದಿಸೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸುವ ಹಾಗೂ ಪರಿಣಾಮಕಾರಿಯಲ್ಲದ ಪಳೆಯುಳಿಕೆ ಇಂಧನಕ್ಕೆ ನೀಡಲಾಗುತ್ತಿರುವ ಸಹಾಯಧನ ರದ್ದುಗೊಳಿಸುವುದನ್ನು ಉತ್ತೇಜಿಸುವ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ADVERTISEMENT

‘ಆರ್ಥಿಕ ಮತ್ತು ತಾಂತ್ರಿಕವಾಗಿ ಸಶಕ್ತವಾಗಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸುವಲ್ಲಿ ಪದೇ ಪದೇ ವಿಫಲವಾಗುತ್ತಿವೆ’ ಎಂದು ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಹವಾಮಾನ ಬದಲಾವಣೆಯಿಂದಾಗುವ ನಷ್ಟ ಹಾಗೂ ಹಾನಿಯನ್ನು ಸರಿದೂಗಿಸಲು ಅಗತ್ಯ ಹಣಕಾಸಿನ ನೆರವು ಒದಗಿಸಬೇಕೆಂದು ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಸಿಒಪಿ–27ರಲ್ಲಿ ಒತ್ತಾಯಿಸಿದ್ದವು. ಈ ನೆರವನ್ನು ಯಾವಾಗ ನೀಡಲಾಗುತ್ತದೆ. ಅದರ ಸ್ವರೂಪ ಏನು ಎಂಬುದನ್ನು ಕರಡು ಪ್ರತಿಯಲ್ಲಿ ಉಲ್ಲೇಖಿಸಿಲ್ಲ.

ಪ್ಯಾರಿಸ್‌ ಒಪ್ಪಂದದ ಅನುಸಾರ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಷಿಯಸ್‌ಗೆ ಮಿತಗೊಳಿಸಬೇಕು. ಈ ಗುರಿ ಸಾಧಿಸಲು ಎಲ್ಲಾ ಹಂತಗಳಲ್ಲೂ ಎಲ್ಲಾ ಬಗೆಯ ಪ್ರಯತ್ನಗಳನ್ನು ನಡೆಸಬೇಕು ಎಂದು20 ಪುಟಗಳ ಕರಡು ಪ್ರತಿಯಲ್ಲಿ ಒತ್ತಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.