ADVERTISEMENT

ಗೋಯಂಕಾ ಹೆಸರು ಬಳಸದಂತೆ ಸೂಚನೆ

ಪಿಟಿಐ
Published 22 ನವೆಂಬರ್ 2019, 20:15 IST
Last Updated 22 ನವೆಂಬರ್ 2019, 20:15 IST

ಮುಂಬೈ: ‘ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ಸಂಸ್ಥಾಪಕ ರಾಮನಾಥ ಗೋಯಂಕಾ ಅವರ ಹೆಸರು ಮತ್ತು ಭಾವಚಿತ್ರವನ್ನು ನಿಮ್ಮ ಪತ್ರಿಕೆ, ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಳಸಬಾರದು’ ಎಂದುಬೆಂಗಳೂರಿನ ‘ಸಜಗ ಸಮಾಚಾರ್‌ ಪರಿವರ್ತನ್‌ ಕಾ’ ಪತ್ರಿಕೆಯ ಪ್ರಕಾಶಕ ಪ್ರಶಾಂತ್‌ ಗೋಯಂಕಾ ಅವರಿಗೆ ಮುಂಬೈ ಹೈಕೋರ್ಟ್‌ ಸೂಚಿಸಿದೆ.

‘ನಾನು ರಾಮನಾಥ ಗೋಯಂಕ ಅವರ ಮೊಮ್ಮಗ, ನನ್ನ ಪತ್ರಿಕೆಯು ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹಕ್ಕೆ ಸೇರಿದೆ ಎಂದು ಪ್ರಶಾಂತ್‌ ಅವರು ಪ್ರಚಾರ ಮಾಡುತ್ತಿದ್ದಾರೆ. ಅದನ್ನು ತಡೆಯಬೇಕು’ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸಿ. ಗುಪ್ತೆ ಅವರು, ‘ಮುಂದಿನ ಆದೇಶ ಬರುವವರೆಗೆ ಗೋಯಂಕಾ ಹೆಸರು ಮತ್ತು ಭಾವಚಿತ್ರಗಳನ್ನು ಬಳಸಬಾರದು’ ಎಂದು ಮಧ್ಯಂತರ ಆದೇಶ ನೀಡಿದ್ದಾರೆ.

‘ಪ್ರಶಾಂತ್‌ ಅವರು ರಾಮನಾಥ ಗೋಯಂಕಾ ಅವರ ಸಹೋದರನ ಮೊಮ್ಮಗನಾಗಿದ್ದು, ಬಾಲ್ಯದಿಂದಲೇ ಗೋಯಂಕಾ ಬಗ್ಗೆ ಅಪಾರ ಗೌರವ ಹೊಂದಿದವರಾಗಿದ್ದಾರೆ. ಅವರ ಖ್ಯಾತಿಯನ್ನು ಹೆಚ್ಚಿಸುವ ಸಲುವಾಗಿಯೇ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಶಾಂತ್‌ ಪರ ವಕೀಲರು ವಾದಿಸಿದರು.

ADVERTISEMENT

ಆದರೆ, ಈ ಪ್ರಕರಣವು ಕುಟುಂಬದ ಹಿರಿಯರೊಬ್ಬರ ಹೆಸರನ್ನು ಬಳಸಿದಲ್ಲಿಗೆ ಸೀಮಿತವಾಗುವುದಿಲ್ಲ. ಬದಲಿಗೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಹೆಸರನ್ನೂ ಬಳಸಿಕೊಂಡಿದ್ದಾರೆ. ಆದರೆ ಪ್ರಶಾಂತ್‌ ಅವರ ಪತ್ರಿಕೆಗೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹಕ್ಕೂ ಸಂಬಂಧ ಇಲ್ಲ ಎಂದು ದೂರುದಾರರು ಹೇಳಿದ್ದಾರೆ’ ಎಂದು ನ್ಯಾಯಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.