ಮುಂಬೈ: ತಂತ್ರಜ್ಞಾನವು ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಸಂಗೀತ, ನೃತ್ಯ ಮತ್ತು ಕಥೆ ಹೇಳುವಿಕೆಯಂತಹ ಕಲಾ ಪ್ರಕಾರಗಳನ್ನು ಬಳಸಿಕೊಂಡು ಹೆಚ್ಚು ಸಹಾನುಭೂತಿಯ ಭವಿಷ್ಯವನ್ನು ನಿರ್ಮಿಸುವಂತೆ ಕಂಟೆಂಟ್ ಕ್ರಿಯೇಟರ್‌ಗಳಿಗೆ ಒತ್ತಾಯಿಸಿದ್ದಾರೆ.
ಜನರನ್ನು ರೋಬೋಟ್‌ಗಳಾಗಿ ಪರಿವರ್ತಿಸಬಾರದು. ನಾವು ಅವರನ್ನು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡಬೇಕಾಗಿದೆ ಎಂದು ಮೋದಿ ಮೊದಲ ವಿಶ್ವ ಶ್ರವಣ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಪ್ರಪಂಚದಾದ್ಯಂತದ ಕಂಟೆಂಟ್ ಸೃಷ್ಟಿಕರ್ತರು, ನವೋದ್ಯಮಗಳು, ಉದ್ಯಮದ ಪ್ರಮುಖರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಮೂಲಕ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಿ ಇರಿಸಲು ವೇವ್ಸ್ ಅನ್ನು ವೇದಿಕೆಯಾಗಿ ಕಲ್ಪಿಸಲಾಗಿದೆ.
ಆನ್‌ಲೈನ್ ಕಂಟೆಂಟ್ ಕುರಿತು ತೀವ್ರ ಚರ್ಚೆಯ ಹಿನ್ನೆಲೆಯಲ್ಲಿ ಮತ್ತು ಅದನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತವು ಚಲನಚಿತ್ರ ನಿರ್ಮಾಣ, ಡಿಜಿಟಲ್ ಕಂಟೆಂಟ್, ಗೇಮಿಂಗ್, ಫ್ಯಾಷನ್, ಸಂಗೀತ ಮತ್ತು ನೇರಪ್ರಸಾರದ ಸಂಗೀತ ಕಛೇರಿಗಳಿಗೆ ಅಂತರರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಈ ಸಮಯದಲ್ಲಿ ವೇವ್ಸ್ ಜಾಗತಿಕ ಪ್ರತಿಭಾ ವೇದಿಕೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಭಾರತವು ಇನ್ನೂ ಹೆಚ್ಚಿನದನ್ನು ನೀಡಲು ಸಿದ್ಧವಿರುವಾಗ, ಜಗತ್ತು ಕಥೆ ಹೇಳುವ ಹೊಸ ಮಾರ್ಗಗಳನ್ನು ಹುಡುಕುತ್ತಿರುವಾಗ ‘ಭಾರತದಲ್ಲಿ ರಚಿಸಿ, ಜಗತ್ತಿಗಾಗಿ ರಚಿಸಿ’ಎಂಬುದನ್ನು ಹೇಳಲು ಇದು ಸರಿಯಾದ ಸಮಯ ಎಂದು ಅವರು ಹೇಳಿದ್ದಾರೆ.
ಸೃಜನಶೀಲ ಜಗತ್ತು ಮಾನವರಲ್ಲಿ ಕರುಣೆಯನ್ನು ಬೆಳೆಸುವ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಆಳಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ,
ರೋಬೋಟ್ ರೀತಿಯ ಜನರನ್ನು ಸೃಷ್ಟಿಸುವುದು ನಮ್ಮ ಗುರಿಯಲ್ಲ, ಹೆಚ್ಚಿನ ಸಂವೇದನೆ, ಭಾವನಾತ್ಮಕ ಆಳ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಪೋಷಿಸುವುದು ನಮ್ಮ ಆದ್ಯತೆ ಎಂದಿದ್ದಾರೆ.
ಯುವ ಪೀಳಿಗೆಯನ್ನು ವಿಭಜಕ ಮತ್ತು ಹಾನಿಕಾರಕ ಸಿದ್ಧಾಂತಗಳಿಂದ ರಕ್ಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಾಂಸ್ಕೃತಿಕ ಸಮಗ್ರತೆಯನ್ನು ಎತ್ತಿಹಿಡಿಯಲು ಮತ್ತು ಸಕಾರಾತ್ಮಕ ಮೌಲ್ಯಗಳನ್ನು ಹುಟ್ಟುಹಾಕಲು WAVES ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.