ADVERTISEMENT

ಲಸಿಕೆ ಕೊರತೆಯತ್ತ ಬೊಟ್ಟು ಮಾಡಿದ ಸಿಸೋಡಿಯಾ

‘ಅಗತ್ಯವಿರುವುದು 2.94 ಕೋಟಿ ಡೋಸ್‌ ಲಸಿಕೆ; ಬಂದಿರುವುದು 57 ಲಕ್ಷ ಡೋಸ್‌ ಮಾತ್ರ’

ಶೆಮಿಜ್‌ ಜಾಯ್‌
Published 21 ಜೂನ್ 2021, 12:13 IST
Last Updated 21 ಜೂನ್ 2021, 12:13 IST
ಮನೀಶ್‌ ಸಿಸೋಡಿಯಾ
ಮನೀಶ್‌ ಸಿಸೋಡಿಯಾ   

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಉಚಿತ ಸಾರ್ವತ್ರಿಕ ಕೋವಿಡ್ -19 ಲಸಿಕಾ ಅಭಿಯಾನ ಪ್ರಾರಂಭಿಸುತ್ತಿದ್ದಂತೆ ಎಎಪಿ ನೇತೃತ್ವದ ದೆಹಲಿ ಸರ್ಕಾರವು, ಲಸಿಕೆ ಕೊರತೆಯ ಬಗ್ಗೆ ಬೊಟ್ಟು ಮಾಡಿದೆ.

ಕೇಂದ್ರದ ಲಸಿಕಾ ಅಭಿಯಾನವು ವಿಶ್ವದ ಅತ್ಯಂತ ‘ಗೊಂದಲಮಯ, ಹಳಿ ತಪ್ಪಿದ’ ಕಾರ್ಯಕ್ರಮ ಎಂದು ಟೀಕಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಷ್ಟ್ರ ರಾಜಧಾನಿಗೆ ಜೂನ್ 21ರ ನಂತರ ಈ ತಿಂಗಳ ಉಚಿತ ಲಸಿಕೆಗಳು ಸಿಗುತ್ತಿಲ್ಲ ಎಂದು ಸೋಮವಾರ ದೂರಿದರು.

ಮುಂದಿನ ತಿಂಗಳು 15 ಲಕ್ಷ ಡೋಸ್‌ ಲಸಿಕೆಗಳು ಮಾತ್ರ ದೆಹಲಿಗೆ ಸಿಗಲಿದೆ. ಇದು ದೆಹಲಿಯ ಅವಶ್ಯಕತೆಗಿಂತ ಕಡಿಮೆ. ಆದರೆ ಉಚಿತ ಲಸಿಕೆಗಳಿಗಾಗಿ ಪ್ರಧಾನಮಂತ್ರಿಗೆ ‘ಧನ್ಯವಾದಗಳು’ ಜಾಹೀರಾತುಗಳನ್ನು ನೀಡುವಂತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಅವರು ಆರೋಪಿಸಿದರು.

ADVERTISEMENT

ಬಿಜೆಪಿ ನೇತೃತ್ವದ ಸರ್ಕಾರವಿರುವ ರಾಜ್ಯಗಳ ಜಾಹೀರಾತುಗಳನ್ನು ಉಲ್ಲೇಖಿಸಿದ ಸಿಸೋಡಿಯಾ, ‘ಮೋದಿಗೆ ಧನ್ಯವಾದಗಳು’ ಎಂಬ ಜಾಹೀರಾತುಗಳನ್ನು ನೀಡುವಂತೆ ಕೇಂದ್ರದಿಂದದೆಹಲಿ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೇರಲಾಗಿದೆ ಎಂದರು.

‘ಯಾವುದೇ ಲಸಿಕೆಗಳಿಲ್ಲ ಆದರೆ ಜಾಹೀರಾತುಗಳಿವೆ. ಜಾಹೀರಾತುಗಳಿಗಾಗಿ ಖರ್ಚು ಮಾಡಿದ ಹಣವನ್ನು ಲಸಿಕೆಗಳಿಗೆ ಬಳಸಿದರೆ, ರಾಜ್ಯಗಳು ವಿದೇಶದಿಂದಲೂ ಖರೀದಿಸಬಹುದು. ನಮಗೆ ಬೇಕಾಗಿರುವುದು ಜಾಹೀರಾತುಗಳಲ್ಲ, ಲಸಿಕೆಗಳು’ ಎಂದು ಅವರು ಕೇಂದ್ರದ ವಿರುದ್ಧ ಹರಿಹಾಯ್ದರು.

‘ನಮಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ನೀಡಿದರೆ ಎರಡು ತಿಂಗಳೊಳಗೆ ದೆಹಲಿಯ ಎಲ್ಲ ಜನರಿಗೆ ಲಸಿಕೆ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗಾಗಲೇ ಹೇಳಿದ್ದಾರೆ. ದೆಹಲಿಗೆ 2.94 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಇದುವರೆಗೆ ಕೇವಲ 57 ಲಕ್ಷ ಡೋಸ್‌ ಲಸಿಕೆ ಮಾತ್ರ ಹಂಚಿಕೆಯಾಗಿದೆ. ಜುಲೈ ತಿಂಗಳಿಗೆ 15 ಲಕ್ಷ ಡೋಸ್‌ ಉಚಿತ ಲಸಿಕೆಗಳನ್ನು ಮಂಜೂರು ಮಾಡಲಾಗಿದೆ. ರಾಜಧಾನಿಯ ಸಂಪೂರ್ಣ ಜನಸಂಖ್ಯೆಗೆ ಲಸಿಕೆ ಹಾಕಲು ಇನ್ನೂ 15-16 ತಿಂಗಳು ಬೇಕಾಗಲಿದೆ’ ಎಂದು ಅವರು ಹೇಳಿದರು.

ಜಗತ್ತಿನಲ್ಲೇ ಭಾರತವು ಅತಿದೊಡ್ಡ ಲಸಿಕಾ ಅಭಿಯಾನ ನಡೆಸುತ್ತಿದೆ ಎಂದು ನೀವು ಹೇಳುತ್ತಿದ್ದೀರಿ, ಆದರೆ, ಈ ಯೋಜನೆಯನ್ನು ಜಗತ್ತಿನಲ್ಲೇ ಅಸರ್ಮಪಕವಾಗಿ, ಹಳಿತಪ್ಪಿದ ಹಾಗೂ ಗೊಂದಲಮಯವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.