ADVERTISEMENT

ದೆಹಲಿ ಮೇಯರ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತ ಹಕ್ಕಿಲ್ಲ: ಸುಪ್ರೀಂ

ದೆಹಲಿ ಮೇಯರ್‌ ಚುನಾವಣೆ: ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ ತೀರ್ಪು

ಪಿಟಿಐ
Published 13 ಫೆಬ್ರುವರಿ 2023, 16:21 IST
Last Updated 13 ಫೆಬ್ರುವರಿ 2023, 16:21 IST
   

ನವದೆಹಲಿ: ‘ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ದೆಹಲಿಯ ಆಮ್‌ ಆದ್ಮಿ ಪಕ್ಷದ (ಎಎಪಿ) ಮೇಯರ್‌ ಅಭ್ಯರ್ಥಿ ಶೆಲ್ಲಿ ಒಬೆರಾಯ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ‘ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂಬುದನ್ನು ಸಾಂವಿಧಾನಿಕ ನಿಬಂಧನೆಗಳಲ್ಲೇ ಸ್ಪಷ್ಟಪಡಿಸಲಾಗಿದೆ’ ಎಂದು ತಿಳಿಸಿತು.

ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಸಂಜಯ್‌ ಜೈನ್‌, ‘ಇದೇ 16ರಂದು ನಿಗದಿಯಾಗಿರುವ ಮೇಯರ್‌ ಚುನಾವಣೆಯನ್ನು17ರ ನಂತರ ನಡೆಸಬೇಕು’ ಎಂದು ಮನವಿ ಮಾಡಿದರು. ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಅವರ ಮನವಿಯನ್ನು ಮಾನ್ಯ ಮಾಡಿತು.

ADVERTISEMENT

‘ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ. ಇದನ್ನು ಸ್ಪಷ್ಟವಾಗಿಯೇ ತಿಳಿಸಲಾಗಿದೆ ಜೈನ್‌ ಅವರೇ’ ಎಂದು ಮುಖ್ಯ ನ್ಯಾಯಮೂರ್ತಿಯವರು ಎಎಸ್‌ಜಿಗೆ ತಿಳಿಸಿದರು. ಈ ವಿಚಾರದ ಕುರಿತು ವಾದ ಮಂಡಿಸಲು ನನಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದು ಜೈನ್‌ ಅವರು ನ್ಯಾಯಪೀಠಕ್ಕೆ ಕೋರಿದರು.

ಎಎಪಿ ಮುಖಂಡರೊಬ್ಬರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ‘ಮೂರು ಬಾರಿ ಸಭೆ ನಡೆಸಿ ಚರ್ಚಿಸಿದರೂ ಮೇಯರ್ ಚುನಾವಣೆ ನಡೆಸಿಲ್ಲ’ ಎಂದು ಹೇಳಿದರು.

‘ದೆಹಲಿ ಮಹಾನಗರ ಪಾಲಿಕೆಯ ಹಂಗಾಮಿ ಅಧ್ಯಕ್ಷರು ಮೇಯರ್‌, ಉಪ ಮೇಯರ್‌ ಮತ್ತು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ. ಇದು ದೆಹಲಿ ಮಹಾನಗರ ಪಾಲಿಕೆ ಕಾಯ್ದೆಗೆ ವಿರುದ್ಧವಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದರು.

‘ನಾಮನಿರ್ದೇಶಿತ ಸದಸ್ಯರಿಗೆ ಮೇಯರ್‌ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬಾರದು. ಮೇಯರ್‌, ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕು’ ಎಂದು ಒಬೆರಾಯ್‌ ಅವರ ಪರ ವಕೀಲ ಶಾದನ್‌ ಫರಾಸತ್‌ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವುದಕ್ಕೆ ಸಂವಿಧಾನದ 236–ಆರ್‌ ನೇ ವಿಧಿಯಲ್ಲಿ ಅವಕಾಶ ಇಲ್ಲ. ಹೀಗಿದ್ದರೂ ಅವರಿಗೆ ಮತದಾನದ ಅವಕಾಶ ಕಲ್ಪಿಸುವುದಾಗಿ ಹಂಗಾಮಿ ಅಧ್ಯಕ್ಷರು ಹೇಳುತ್ತಿದ್ದಾರೆ. ಹೀಗಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಸಿಂಘ್ವಿ ಅವರು ಈ ಹಿಂದೆ ನ್ಯಾಯಪೀಠಕ್ಕೆ ಕೋರಿದ್ದರು.

ಉಭಯ ಬಣದವರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತು.

ಎಎಪಿ–ಬಿಜೆಪಿ ವಾಕ್ಸಮರ

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಎಎಪಿ ಹಾಗೂ ಬಿಜೆಪಿ ಮುಖಂಡರು ವಾಕ್ಸಮರ ನಡೆಸಿದ್ದಾರೆ.

‘ಬಿಜೆಪಿಯು ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ವಾಮ ಮಾರ್ಗ ಅನುಸರಿಸುತ್ತಿದೆ’ ಎಂದು ಎಎಪಿ ಆರೋಪಿಸಿದೆ. ಎಎ‍ಪಿ ಆರೋಪಕ್ಕೆ ಬಿಜೆಪಿಯೂ ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.