ADVERTISEMENT

ಮಮತಾ ವಿರುದ್ಧ ರಾಷ್ಟ್ರಗೀತೆಗೆ ಅಗೌರವ: ಮಧ್ಯಪ್ರವೇಶಕ್ಕೆ ಬಾಂಬೆ ಹೈಕೋರ್ಟ್ ನಕಾರ

ಪಿಟಿಐ
Published 29 ಮಾರ್ಚ್ 2023, 13:41 IST
Last Updated 29 ಮಾರ್ಚ್ 2023, 13:41 IST
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ) 
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)    

ಮುಂಬೈ: ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ದೂರಿನ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ನ್ಯಾಯಮೂರ್ತಿ ಅಮಿತ್ ಬೋರ್ಕರ್ ನೇತೃತ್ವದ ಏಕಸದಸ್ಯ ಪೀಠವು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿಚಾರಣೆ ಮತ್ತು ಸಮನ್ಸ್‌ಗೆ ಸೂಚನೆ ನೀಡುವ ಕುರಿತು ಸೆಷನ್ಸ್ ನ್ಯಾಯಾಲಯವು 2023ರ ಜನವರಿಯಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು.

ಮಮತಾ ಅವರು ತಮ್ಮ ಅರ್ಜಿಯಲ್ಲಿ ಸೆಷನ್ಸ್ ನ್ಯಾಯಾಲಯವು ಸಮನ್ಸ್ ಅನ್ನು ರದ್ದುಗೊಳಿಸುವ ಮತ್ತು ವಿಷಯವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸುವ ಬದಲು ಇಡೀ ದೂರನ್ನೇ ರದ್ದುಗೊಳಿಸಬೇಕು ಎಂದೂ ಕೋರಿದ್ದರು.

ADVERTISEMENT

‘ಹೊಸದಾಗಿ ವಿಚಾರಣೆ ನಡೆಸುವ ಸಲುವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿಷಯವನ್ನು ಹಿಂತಿರುಗಿಸಿ ಮತ್ತು ಸಮನ್ಸ್ ಅನ್ನು ಹೊಸದಾಗಿ ನೀಡುವ ಬಗ್ಗೆ ನಿರ್ಧರಿಸಲು ಸೆಷನ್ಸ್ ನ್ಯಾಯಾಲಯವು ನೀಡಿದ ಆದೇಶದಲ್ಲಿ ಯಾವುದೇ ದೋಷವಿಲ್ಲ. ಹಾಗಾಗಿ ಹೈಕೋರ್ಟ್ ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದೂ ನ್ಯಾಯಮೂರ್ತಿ ಬೋರ್ಕರ್ ಹೇಳಿದ್ದಾರೆ.

ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿ‌ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ತಾವು ಕುಳಿತ ಸ್ಥಾನದಲ್ಲಿಯೇ ರಾಷ್ಟ್ರಗೀತೆ ಹಾಡಲು ಆರಂಭಿಸಿದ್ದರು. ಬಳಿಕ ಅವರು ಎದ್ದುನಿಂತರು. ಅಲ್ಲಿಂದ ಹೊರಡುವ ಮೊದಲು ರಾಷ್ಟ್ರಗೀತೆಯ ಒಂದೆರಡು ಸಾಲುಗಳನ್ನು ಹಾಡಿದ್ದಾರೆ ಎಂದು ಆರೋಪಿಸಿ ವಿವೇಕಾನಂದ ಗುಪ್ತಾ ಎಂಬುವರು ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2022ರ ಮಾರ್ಚ್‌ನಲ್ಲಿ ಮಮತಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.