ADVERTISEMENT

ಪುರುಷನ ದೇಹದಿಂದ ಗರ್ಭಕೋಶ ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 14:42 IST
Last Updated 10 ಮಾರ್ಚ್ 2019, 14:42 IST
   

ಲಖನೌ: ವ್ಯಕ್ತಿಯೊಬ್ಬರಲ್ಲಿ ಹರ್ನಿಯಾ ಬೆಳೆದಿದೆ ಎಂದು ಪತ್ತೆ ಮಾಡಿದ್ದ ವೈದ್ಯರಿಗೆ, ಅದನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನೆರವೇರಿಸಿದಾಗ ಅಚ್ಚರಿ ಕಾದಿತ್ತು!

ಹರ್ನಿಯಾ ಎಂದು ಭಾವಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ವ್ಯಕ್ತಿಯ ದೇಹದಲ್ಲಿ ಕಂಡದ್ದು ಗರ್ಭಕೋಶ!

ಹರ್ದೋಯಿ ಜಿಲ್ಲೆಯ ಶರೀಫ್‌ ಅಲಿ ಎಂಬ, ಮೂರು ಮಕ್ಕಳ ತಂದೆಗೆ ಕಳೆದ ಕೆಲವು ತಿಂಗಳಿನಿಂದ ಹೊಟ್ಟಿಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸಿ, ಅಲಿ ಅವರಿಗೆ ಹರ್ನಿಯಾ ಇದ್ದು, ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನೆರವೇರಿಸಬೇಕು ಎಂದು ಹೇಳಿದರು.

ADVERTISEMENT

‘ಶಸ್ತ್ರಚಿಕಿತ್ಸೆಗೆ ಮುಂದಾದಾಗ ನಮಗೆ ಅಚ್ಚರಿ ಕಾದಿತ್ತು. ಹರ್ನಿಯಾ ಬದಲು ಗರ್ಭಕೋಶ ಕಂಡಿತು. ಫಾಲೋಪಿಯನ್‌ ನಾಳವೂ ಇತ್ತು. ಆದರೆ, ಅಲಿ ಅವರಲ್ಲಿ ಹರ್ನಿಯಾಕ್ಕೆ ಸಂಬಂಧಿಸಿದ ಲಕ್ಷಣಗಳೇ ಕಾಣಿಸಿಕೊಂಡಿದ್ದವು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅಲಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವೈದ್ಯ ಡಾ.ವಿನೀತ್‌ ಕುಮಾರ್‌ ವರ್ಮಾ ಹೇಳಿದರು.

‘ಇದು ಅಪರೂಪದ ಪ್ರಕರಣ. ವೈದ್ಯಕೀಯ ಭಾಷೆಯಲ್ಲಿ ‘ಪರ್ಸಿಸ್ಟೆಂಟ್ ಮುಲ್ಲೇರಿಯಾ ಡಕ್ಟ್‌ ಸಿಂಡ್ರೋಮ್‌’ ಎಂದು ಕರೆಯಲಾಗುತ್ತದೆ. 1939ರಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಜಗತ್ತಿನಲ್ಲಿ ಈ ವರೆಗೆ ಇಂತಹ ಲಕ್ಷಣ ಹೊಂದಿರುವ 150 ಪ್ರಕರಣಗಳು ವರದಿಯಾಗಿವೆ’ ಎಂದೂ ಡಾ.ವರ್ಮಾ ಹೇಳಿದರು.

‘ಈ ವಿಷಯ ನಮಗೆ ಅಚ್ಚರಿ ಮತ್ತು ಆಘಾತಕಾರಿ ವಿಷಯ. ಅವರಲ್ಲಿ ಗರ್ಭಕೋಶ ಇತ್ತು ಎಂಬುದನ್ನು ನಾವು ಊಹೆ ಸಹ ಮಾಡಿರಲಿಲ್ಲ’ ಎಂದು ಅಲಿ ಪತ್ನಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.