ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ರಾಜಕೀಯಕ್ಕೆ ಬಳಸದಿರಿ – ಸುಪ್ರೀಂ ಕೋರ್ಟ್

ಪಿಟಿಐ
Published 22 ಆಗಸ್ಟ್ 2024, 20:36 IST
Last Updated 22 ಆಗಸ್ಟ್ 2024, 20:36 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

‘ತಪ್ಪು ಮಾಡಿದವರು ಕಾನೂನಿಗೆ ಅನುಗುಣವಾಗಿ ಶಿಕ್ಷೆ ಅನುಭವಿಸುತ್ತಾರೆ’ ಎಂಬುದನ್ನು ರಾಜಕೀಯದಲ್ಲಿ ಇರುವ ಎಲ್ಲ ಪಕ್ಷಗಳೂ ಅರಿಯಬೇಕು ಎಂಬ ಮಾತನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಸಿಬಿಐ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಉದ್ದೇಶಿಸಿ ಹೇಳಿದೆ.

ADVERTISEMENT

‘ನಮ್ಮ ನಾಯಕಿಯ (ಮಮತಾ ಬ್ಯಾನರ್ಜಿ) ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ ಅವರ ಬೆರಳುಗಳನ್ನು ಕಡಿದುಹಾಕಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಹಾಲಿ ಸಚಿವರೊಬ್ಬರು ಹೇಳಿದ್ದಾರೆ’ ಎಂದು ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

ಈ ಮಾತಿಗೆ ತಿರುಗೇಟು ನೀಡಿದ ಸಿಬಲ್ ಅವರು, ‘ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಗುಂಡು ಹಾರಿಸಲಾಗುತ್ತದೆ ಎಂದಿದ್ದಾರೆ’ ಎಂದರು.

ಟಿಎಂಸಿ, ಬಿಜೆಪಿ ಸ್ವಾಗತ

ಕೋಲ್ಕತ್ತ: ಪ್ರಕರಣವನ್ನು ರಾಜಕೀಯಕ್ಕೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಟಿಎಂಸಿ ಮತ್ತು ಬಿಜೆಪಿ ಸ್ವಾಗತಿಸಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ತಪ್ಪುದಾರಿಗೆ ಎಳೆಯುವ ಮಾಹಿತಿಯನ್ನು ನೀಡಿದೆ ಎಂದು ಆರೋಪಿಸಿದೆ.

‘ಸುಪ್ರೀಂ ಕೋರ್ಟ್ ಆಡಿರುವ ಮಾತುಗಳ ಬಗ್ಗೆ ನಾವು ಅಭಿಪ್ರಾಯ ನೀಡುವ ಕೆಲಸ ಮಾಡುವುದಿಲ್ಲ. ಆದರೆ, ರಾಜಕೀಯ ಪಕ್ಷಗಳು ಇದನ್ನು ರಾಜಕೀಯಕ್ಕೆ ಬಳಸಬಾರದು ಎಂದು ಕೋರ್ಟ್ ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ... ಕೆಲವು ಪಕ್ಷಗಳು ಇದನ್ನು ರಾಜಕೀಯಕ್ಕೆ ಬಳಸಲು ಯತ್ನಿಸುತ್ತಿವೆ’ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.