ADVERTISEMENT

ಮಲಯಾಳ ಕಡ್ಡಾಯ ಮಸೂದೆ: ರಾಷ್ಟ್ರಪತಿಯಿಂದ ವಾಪಸ್‌

ಪಿಟಿಐ
Published 31 ಮೇ 2025, 20:07 IST
Last Updated 31 ಮೇ 2025, 20:07 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಕಾಸರಗೋಡು: ಕೇರಳ ರಾಜ್ಯದ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಿ ಕೇರಳದ ಹಿಂದಿನ ಐಕ್ಯರಂಗ ಸರ್ಕಾರ ಮಂಡಿಸಿದ್ದ ವಿಧೇಯಕಕ್ಕೆ ಅನುಮತಿ ನೀಡಲು ರಾಷ್ಟ್ರಪತಿ ದ್ರೌಪ‍ದಿ ಮುರ್ಮು ನಿರಾಕರಿಸಿದ್ದಾರೆ. 

ಮಸೂದೆಯ ವಿರುದ್ಧ ಹೋರಾಟ ನಡೆಸಿದ್ದ ಕನ್ನಡ ಮತ್ತು ತಮಿಳು ಭಾಷಾ ಪರ ಸಂಘಟನೆಗಳ ಪ್ರತಿನಿಧಿಗಳು  ‘ರಾಜ್ಯದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕು ನಿಷೇಧಿಸಲಾಗುತ್ತಿದೆ’ ಎಂದು ಆರೋಪಿಸಿದ್ದರು. ಆಗ ಕೇರಳದ ರಾಜ್ಯಪಾಲರಾಗಿದ್ದ ಪಿ.ಸದಾಶಿವನ್ ಮಸೂದೆಗೆ ಅನುಮತಿ ನೀಡದೇ, ರಾಷ್ಟ್ರಪತಿ ಅವರ ಪರಿಶೀಲನೆಗೆ ಕಳುಹಿಸಿದ್ದರು.

ಈ ಮೂಸೂದೆ ಜಾರಿಗೊಂಡರೆ ರಾಜ್ಯದ ಎಲ್ಲ ಶಾಲೆಗಳಲ್ಲೂ ಮಲಯಾಳಂ ಭಾಷೆಯನ್ನು ಒಂದನೇ ಭಾಷೆಯಾಗಿ ಕಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಜಿಲ್ಲಾ ನ್ಯಾಯಾಲಯಗಳ ವ್ಯವಹಾರಗಳು, ಕೇರಳ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಮಲಯಾಳಂನಲ್ಲೇ ನಡೆಸಬೇಕು. ಮಲ‌ಯಾಳಂ ಕಲಿತವರಿಗೆ ವೃತ್ತಿಪರ ತರಬೇತಿಗಳ ಪ್ರವೇಶಕ್ಕೆ ಆದ್ಯತೆ ನೀಡಬೇಕು. ಸರ್ಕಾರಿ, ಸಹಕಾರಿ, ಸ್ಥಳೀಯಾಡಳಿತ ಸಂಸ್ಥೆಗಳ ನಾಮಫಲಕ ಮಲಯಾಳಂನಲ್ಲೇ ಇರಬೇಕು ಎಂಬ ಅಂಶಗಳು ಈ ಮಸೂದೆಯಲ್ಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.