ಇ.ಡಿ
ನವದೆಹಲಿ: ‘ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದ್ದ ₹22,280 ಕೋಟಿ ಮೌಲ್ಯದ ಆಸ್ತಿಯನ್ನು ಕಾನೂನುಬದ್ಧ ಹಕ್ಕುದಾರರಿಗೆ ಹಿಂದಿರುಗಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪೂರಕ ಅಂದಾಜುಗಳ ಮೇಲಿನ ಚರ್ಚೆ ವೇಳೆ ಈ ಮಾಹಿತಿ ನೀಡಿದ ಅವರು, ‘ಆರ್ಥಿಕ ಅಪರಾಧಗಳನ್ನು ಎಸಗುವವರ ವಿರುದ್ಧದ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟ ಪಡಿಸಿದರು.
‘ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ₹14,131.6 ಕೋಟಿ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಿಂದಿರುಗಿಸಲಾಗಿದೆ. ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್ ಮೋದಿಗೆ ಸೇರಿದ ₹1,052.58 ಕೋಟಿ ಆಸ್ತಿಯನ್ನು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಇತರೆ ಖಾಸಗಿ ಬ್ಯಾಂಕ್‌ಗಳಿಗೆ ಹಿಂದಿರುಗಿಸಲಾಗಿದೆ. ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ₹2,562.90 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಸದ್ಯದಲ್ಲೇ ಹರಾಜು ಹಾಕಲಾಗುವುದು’ ಎಂದು ವಿವರಿಸಿದರು.
‘ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ (ಎನ್‌ಎಸ್‌ಇಎಲ್) ಪ್ರಕರಣದಲ್ಲಿ ವಂಚನೆಗೆ ಒಳಗಾದ ನೈಜ ಹೂಡಿಕೆದಾರರಿಗೆ ₹17.47 ಕೋಟಿ ವಾಪಸ್ ಮಾಡಲಾಗಿದೆ’ ಎಂದೂ ತಿಳಿಸಿದರು.
‘ಪ್ರಮುಖ ಪ್ರಕರಣಗಳಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ₹22,280 ಕೋಟಿ ಮೊತ್ತದ ಆಸ್ತಿಯನ್ನು ವಾಪಸ್ ನೀಡಿದೆ. ಯಾರನ್ನೂ ನಾವು ಸುಮ್ಮನೆ ಬಿಟ್ಟಿಲ್ಲ. ಒಂದೊಮ್ಮೆ ಅವರು ದೇಶ ಬಿಟ್ಟು ಹೋಗಿದ್ದರೂ, ಅವರ ಆಸ್ತಿಯನ್ನು ವಶಕ್ಕೆ ಪಡೆದುಕೊಂಡು ಬ್ಯಾಂಕ್‌ಗಳಿಗೆ ಹಿಂತಿರುಗಿಸಿದ್ದೇವೆ’ ಎಂದು ವಿವರಿಸಿದರು.
‘ಆರ್ಥಿಕ ಅಪರಾಧವೆಸಗಿದ ಯಾರನ್ನೂ ಬಿಟ್ಟಿಲ್ಲ. ಹಣವನ್ನು ಮರಳಿ ವಶಕ್ಕೆ ಪಡೆದು, ಬ್ಯಾಂಕ್‌ಗಳಿಗೆ ನೀಡಿದ್ದೇವೆ‘ ಎಂದರು.
‘ಕಪ್ಪು ಹಣ ಕಾಯ್ದೆ –2015 ಕಾಯ್ದೆ ಜಾರಿ ಬಳಿಕ ವಿದೇಶದಲ್ಲಿ ಆಸ್ತಿ ಹೊಂದಿರುವವರು ಅವರಾಗಿಯೇ ತಮ್ಮ ಆಸ್ತಿ ಕುರಿತು ಮಾಹಿತಿ ಬಹಿರಂಗಪಡಿಸಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.
ಈ ಕಾಯ್ದೆಯ ಅಡಿ, ಕಳೆದ ಜೂನ್‌ಗೆ ಅಂತ್ಯಗೊಂಡಂತೆ, 687 ಪ್ರಕರಣಗಳನ್ನು ದಾಖಲಿಸಲಾಗಿದ್ದು, 163 ಪ್ರಕರಣಗಳ ಕುರಿತು ಕಾನೂನು ಕ್ರಮ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.
ಲೆಕ್ಕಪತ್ರ ಇಲ್ಲದ ಹಾಗೂ ಬಹಿರಂಗ ಪಡಿಸದೇ ಇರುವ ವಿದೇಶ ಸ್ವತ್ತುಗಳ ವಿಚಾರವಾಗಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಪನಾಮಾ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್, ಎಚ್ಎಸ್‌ಬಿಸಿ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪಡೆದ ಮಾಹಿತಿ ಆಧರಿಸಿ, 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಹೇಳಿದರು.
‘ವಿದೇಶಗಳಲ್ಲಿ ಹೊಂದಿರುವ ಸ್ವತ್ತುಗಳ ಕುರಿತು 2021ರಲ್ಲಿ 60,467 ತೆರಿಗೆದಾರರು ಮಾಹಿತಿ ಬಹಿರಂಗಪಡಿಸಿದ್ದರು. 2024–25ರಲ್ಲಿ ಇಂತಹವರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ’ ಎಂದು ಅವರು ಸದನಕ್ಕೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.