ADVERTISEMENT

ಜಮ್ಮು–ಕಾಶ್ಮೀರದಿಂದ ಮುಂಬೈಗೆ ‘ಚೆರಿ’ ಹೊತ್ತು ಸಾಗಿದ ರೈಲು

ಪಿಟಿಐ
Published 31 ಮೇ 2025, 16:37 IST
Last Updated 31 ಮೇ 2025, 16:37 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಜಮ್ಮು: ಜಮ್ಮು–ಕಾಶ್ಮೀರದ ಕಾತ್ರಾ ರೈಲು ನಿಲ್ದಾಣದಿಂದ 24 ಟನ್ ಚೆರಿ ಹಣ್ಣುಗಳನ್ನು ಹೊತ್ತ ಮೊದಲ ಸರಕು ಸಾಗಣೆ (ಪಾರ್ಸಲ್‌) ರೈಲು ಶನಿವಾರ ಮುಂಬೈಗೆ ಪ್ರಯಾಣ ಬೆಳೆಸಿತು. ಜಮ್ಮು ರೈಲ್ವೆ ವಿಭಾಗದ ಈ ಪ್ರಥಮ ಹೆಜ್ಜೆ ಐತಿಹಾಸಿಕ ಎಂದು ಉತ್ತರ ರೈಲ್ವೆ ಹೇಳಿದೆ. ರೈಲು 30 ಗಂಟೆಗಳಲ್ಲಿ ಮುಂಬೈನ ಬಾಂದ್ರಾ ರೈಲು ನಿಲ್ದಾಣವನ್ನು ತಲುಪಲಿದೆ.

ADVERTISEMENT

ಕಾತ್ರಾದ ಮಾತಾ ವೈಷ್ಣೋದೇವಿ ರೈಲು ನಿಲ್ದಾಣ ಮತ್ತು ಜಮ್ಮು ನಿಲ್ದಾಣದಿಂದ ಇನ್ನೂ ಎರಡು ರೈಲುಗಳು ಎರಡು ದಿನದಲ್ಲಿ ಚೆರಿ ಹಣ್ಣು ಸಾಗಿಸಲು ಸಜ್ಜಾಗಿವೆ. ಕಾಶ್ಮೀರದ ಹಣ್ಣು ಬೆಳೆಗಾರರು ಇದನ್ನು ಸ್ವಾಗತಿಸಿ, ಬೇಗ ಹಾಳಾಗುವ ಹಣ್ಣುಗಳನ್ನು ದೇಶದ ವಿವಿಧ ಭಾಗಗಳಿಗೆ ಕಣಿವೆಯಿಂದ ಸಾಗಣೆ ಮಾಡಲು ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಬಹುದಿನದ ನಿರೀಕ್ಷೆ ಈಡೇರುವ ವಿಶ್ವಾಸ ಇದೆ ಎಂದಿದ್ದಾರೆ.

‘ಇತ್ತೀಚೆಗಷ್ಟೇ ರಚಿಸಲಾದ ಜಮ್ಮು ರೈಲು ನಿಗಮ 24 ಟನ್ ಚೆರಿ ಹಣ್ಣನ್ನು ಸಾಗಿಸುತ್ತಿರುವ ಈ ದಿನ ಐತಿಹಾಸಿಕ. ಮುಂದಿನ ದಿನಗಳಲ್ಲಿ ಮತ್ತಷ್ಟು ಭಾಗಗಳಿಂದ ಹಣ್ಣು ಸಾಗಣೆ ಮಾಡಲಾಗುವುದು’ ಎಂದು ಉತ್ತರ ರೈಲ್ವೆ ಹಿರಿಯ ಅಧಿಕಾರಿ ಉಚಿತ್ ಸಿಂಘಾಲ್‌ ಹೇಳಿದ್ದಾರೆ.

ಜಮ್ಮುವಿನ ನವ ಕಾಶ್ಮೀರ ಹಣ್ಣು ಬೆಳೆಗಾರರ ಸಂಘದ ಸದಸ್ಯ ಅಲಿ ಮೊಹಮ್ಮದ್, ‘ಈ ಹಿಂದೆ ಪಾರ್ಸೆಲ್‌ ರೈಲಿಗಾಗಿ ಅಮೃತ್‌ಸರಕ್ಕೆ ಹೋಗಬೇಕಿತ್ತು. ಕಾಶ್ಮೀರದಿಂದ ದೇಶದ ಇತರೆ ಭಾಗಕ್ಕೆ ಶೀಘ್ರವಾಗಿ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಪ್ರಧಾನಿ ಮೋದಿ ಅವರನ್ನು ಮನವಿ ಮಾಡುತ್ತೇವೆ’ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲೇ ಕಾತ್ರಾದಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ನೇರ ರೈಲನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.