ಲಖನೌ: ಉತ್ತರ ಪ್ರದೇಶದ ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ಮಾಡಿದ ಪೇಂಟ್ ಅನ್ನು ಬಳಿಯಲು ಹೇಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಲಹೆಯ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಗೋಬರ್ನಾಮ: ಬಿಜೆಪಿ ಸರ್ಕಾರ ಹೊಸ ಸಾಧನೆ’ ಎಂದು ವ್ಯಂಗ್ಯವಾಡಿದ್ದಾರೆ.
ಅಖಿಲೇಶ್ ಅವರ ‘ಎಕ್ಸ್’ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ‘ಅಖಿಲೇಶ್ ಅವರು ಗೋವುಗಳನ್ನು ಮತ್ತು ಸಗಣಿಯನ್ನು ದ್ವೇಷಿಸುತ್ತಾರೆ. ಆಸ್ಟ್ರೇಲಿಯಾಗೆ ಹೋಗಿಬಂದ ನಂತರ ಅವರು ಭಾರತೀಯ ಸಂಸ್ಕೃತಿಯನ್ನು ಮರೆತಿದ್ದಾರೆ ಅಥವಾ ಅವರು ತಮ್ಮ ಓಲೈಕೆ ರಾಜಕಾರಣಕ್ಕಾಗಿ ಗೋವು, ಗಂಗೆ ಮತ್ತು ಗೀತೆಗೆ ಅವಮಾನ ಮಾಡುತ್ತಿದ್ದಾರೆ’ ಎಂದರು.
ರಾಜ್ಯದ ಪಶುಪಾಲನೆ ಹಾಗೂ ಹೈನುಗಾರಿಕೆ ಇಲಾಖೆಯ ಕಾರ್ಯವೈಖರಿ ಕುರಿತು ಭಾನುವಾರ ಪರಿಶೀಲನೆ ನಡೆಸಿದ್ದ ಯೋಗಿ ಆದಿತ್ಯನಾಥ, ‘ರಾಜ್ಯದಲ್ಲಿರುವ ಗೋ ರಕ್ಷಣಾ ಕೇಂದ್ರಗಳು ಸ್ವಾವಲಂಬಿಗಳಾಗಬೇಕು. ಗೋವಿನ ಸಗಣಿಯಿಂದ ಮಾಡಿದ ನೈಸರ್ಗಿಕ ಪೇಂಟ್ ಅನ್ನು ಸರ್ಕಾರಿ ಕಟ್ಟಡಗಳಿಗೆ ಬಳಿಯಬೇಕು. ಪೇಂಟ್‌ಗಳ ತಯಾರಿಕೆಯನ್ನೂ ಅಧಿಕಗೊಳಿಸಬೇಕು’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.