ಅಹಮದಾಬಾದ್: ಗೋದ್ರಾ ಗಲಭೆ ಪ್ರಕರಣದಲ್ಲಿ 5 ವರ್ಷ ಜೈಲುಶಿಕ್ಷೆಗೆ ಒಳಗಾಗಿದ್ದ ಮೂವರು ಅಪರಾಧಿಗಳನ್ನು ಗುಜರಾತ್ ಹೈಕೋರ್ಟ್ ಖುಲಾಸೆಗೊಳಿಸಿದೆ.
ವಿಚಾರಣಾ ನ್ಯಾಯಾಲಯವು ‘ಸಾಕ್ಷಿಗಳನ್ನು ಪರಿಗಣಿಸುವಲ್ಲಿ ತಪ್ಪು ಮಾಡಿದೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೆಳ ನ್ಯಾಯಾಲಯದಿಂದ ಶಿಕ್ಷೆ ಪ್ರಕಟಗೊಂಡ 19 ವರ್ಷಗಳ ಬಳಿಕ ತೀರ್ಪು ನೀಡಿದೆ.
‘ವಿಶ್ವಾಸಾರ್ಹ ಹಾಗೂ ದೃಢೀಕರಿಸುವ ಪುರಾವೆ ಆಧರಿಸಿ, ಶಿಕ್ಷೆಯನ್ನು ಪ್ರಕಟಿಸಿಲ್ಲ. ವಿಚಾರಣೆ ವೇಳೆ ಅಪರಾಧಿಗಳ ಗುರುತು ಕೂಡ ಸಾಬೀತಾಗಿಲ್ಲ. ಕಾನೂನಿಗೆ ವಿರುದ್ಧವಾಗಿ ಅಪರಾಧಿಗಳು ಒಂದೆಡೆ ಸೇರಿದ್ದರೆ ಎಂಬುದು ಕೂಡ ಸಾಬೀತಾಗಿಲ್ಲ. ಅವರೆಲ್ಲರಿಗೂ ಬೆಂಕಿ ಹಚ್ಚಿ, ಗಲಭೆ ನಡೆಸುವ ಉದ್ದೇಶ ಹೊಂದಿದ್ದರೆ ಎಂಬುದನ್ನು ಕೂಡ ಸಾಬೀತುಪಡಿಸಿಲ್ಲ. ಖಾಸಗಿ ಆಸ್ತಿಗಳಿಗೆ ಬೆಂಕಿ ಹಚ್ಚಿ, ನಾಶಪಡಿಸುವ ಗುರಿ ಹೊಂದಿದ್ದರೆ ಎಂಬುದನ್ನೂ ವಿಚಾರಣೆ ವೇಳೆ ದೃಢಪಡಿಸಿಲ್ಲ’ ಎಂದು ನ್ಯಾಯಮೂರ್ತಿ ಗೀತಾ ಗೋಪಿ ಪ್ರಕಟಿಸಿದ ತೀರ್ಪಿನಲ್ಲಿ ತಿಳಿಸಿದ್ದಾರೆ.
ಗೋದ್ರಾದಲ್ಲಿ 59 ಮಂದಿ ಕರಸೇವಕರನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ಬಳಿಕ ಆನಂದ್ ಜಿಲ್ಲೆಯ ಲೊಟಿಯಾ ಬಗೋಡ್‌ನಲ್ಲಿ 2002ರ ಮಾರ್ಚ್ 1ರಂದು ಶಸ್ತ್ರಸಜ್ಜಿತ 9 ಜನರ ಗುಂಪು ಬೆಂಕಿ ಹಚ್ಚಿದ ಆರೋಪಕ್ಕೆ ಗುರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.