ADVERTISEMENT

ಸೌಲಭ್ಯ ನಿರಾಕರಿಸಿದ ಇಂಡಿಗೊ ಸಿಬ್ಬಂದಿ: ಪ್ರಯಾಣಿಕ ಆರೋಪ

ಪಿಟಿಐ
Published 20 ಜನವರಿ 2024, 13:05 IST
Last Updated 20 ಜನವರಿ 2024, 13:05 IST
ಇಂಡಿಗೊ
ಇಂಡಿಗೊ   

ಕೋಲ್ಕತ್ತ: ಜನವರಿ 19ರಂದು ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೊ ವಿಮಾನವು ಪ್ರತಿಕೂಲ ಹವಾಮಾನದ ಕಾರಣ ಕೋಲ್ಕತ್ತದಲ್ಲಿ ಇಳಿದಿತ್ತು. ಆ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ನೀಡಿದ್ದ ಭರವಸೆಗಳನ್ನು, ವಿಮಾನದಿಂದ ಇಳಿದ ಬಳಿಕ ಈಡೇರಿಸಲಿಲ್ಲ ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎಲ್ಲ ಪ್ರಯಾಣಿಕರಿಗೂ ತಂಗಲು ಹೋಟೆಲ್‌ ವ್ಯವಸ್ಥೆ ಮತ್ತು ಪರ್ಯಾಯ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಮಾನದಲ್ಲಿದ್ದ ಸಿಬ್ಬಂದಿ ಪ್ರಯಾಣಿಕರಿಗೆ ‘ಸುಳ್ಳು ಭರವಸೆ’ ನೀಡಿದ್ದರು ಎಂದು ಪ್ರಯಾಣಿಕ ವಿಕ್ರಮ್‌ ಶ್ರೀವಾಸ್ತವ ಎಂಬುವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

‘ಆಹಾರದ ಪ್ಯಾಕೆಟ್‌ ನೀಡಿ, ವಾರದೊಳಗೆ ಶುಲ್ಕ ಮರುಪಾವತಿಸುವ ಭರವಸೆಯನ್ನಷ್ಟೇ ವಿಮಾನ ನಿಲ್ದಾಣದಲ್ಲಿದ್ದ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನೀಡಿದರು. ಉಳಿದ ಸೌಲಭ್ಯವನ್ನು ಅವರು ನಿರಾಕರಿಸಿದರು. ಹೀಗೆ ಬೇರೆಯೇ ಸ್ಥಳವೊಂದರಲ್ಲಿ ಪ್ರಯಾಣಿಕರನ್ನು ಇಳಿಸಲು ನಿಯಮ ಅನುಮತಿಸುತ್ತದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ವಿಮಾನದಲ್ಲಿ ಗರ್ಭಿಣಿಯರು ಮತ್ತು ವಯಸ್ಸಾದವರು ಪ್ರಯಾಣಿಸುತ್ತಿದ್ದರು. ಆದರೆ ಇಂಡಿಗೊ ಸಿಬ್ಬಂದಿಯು ಪ್ರಯಾಣಿಕರಿಗೆ ಸಹಾಯ ಮಾಡಲು ನಿರಾಕರಿಸಿತು’ ಎಂದಿರುವ ಅವರು, ಪ್ರಯಾಣಿಕರು ಮತ್ತು ಇಂಡಿಗೊ ಸಿಬ್ಬಂದಿ ನಡುವಿನ ವಾಗ್ವಾದ ತೋರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆ, ‘ಪ್ರಯಾಣಿಕರಿಗೆ ಮತ್ತೊಂದು ವಿಮಾನವನ್ನು ಆಯ್ಕೆ ಮಾಡುವ ಅಥವಾ ಶುಲ್ಕವನ್ನು ಮರು ಪಡೆಯುವ ಆಯ್ಕೆಯನ್ನು ನೀಡಲಾಗಿತ್ತು. ಕೆಲವರು ಮತ್ತೊಂದು ವಿಮಾನವನ್ನು ಆರಿಸಿಕೊಂಡರೆ, ಇನ್ನೂ ಕೆಲವರು ಮರುಪಾವತಿಯನ್ನು ಆರಿಸಿಕೊಂಡರು. ಎಲ್ಲ ಪ್ರಯಾಣಿಕರಿಗೂ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.