ADVERTISEMENT

ಸೆಪ್ಟೆಂಬರ್‌ 12ರ ವರೆಗೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಜ್ಞಾನವಾಪಿ ಮಸೀದಿ ಮೊಕದ್ದಮೆ ವಿಚಾರಣೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 14:32 IST
Last Updated 24 ಆಗಸ್ಟ್ 2022, 14:32 IST
ಜ್ಞಾನವಾಪಿ ಮಸೀದಿ 
ಜ್ಞಾನವಾಪಿ ಮಸೀದಿ    

ವಾರಾಣಸಿ (ಪಿಟಿಐ): ಜ್ಞಾನವಾಪಿ ಮಸೀದಿ– ಶೃಂಗಾರ ಗೌರಿ ಆವರಣ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಲ್ಲಿಯ ಜಿಲ್ಲಾ ನ್ಯಾಯಾಲಯವು ತೀರ್ಪನ್ನು ಸೆಪ್ಟೆಂಬರ್‌ 12ರವರೆಗೆ ಕಾಯ್ದಿರಿಸಿದೆ.

ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರ ಪರ ವಕೀಲರು ಬುಧವಾರ ತಮ್ಮ ವಾದ ಮಂಡಣೆಯನ್ನು ಮುಕ್ತಾಯಗೊಳಿಸಿರು. ಅದಾದ ಬಳಿಕ ನ್ಯಾಯಾಧೀಶರಾದ ಎ.ಕೆ. ವಿಶ್ವೇಶ್‌ ಅವರು ತೀರ್ಪನ್ನು ಕಾಯ್ದಿರಿಸಿದರು ಎಂದು ಹಿಂದು ಅರ್ಜಿದಾರರ ಪರ ವಕೀಲ ಮದನ ಮೋಹನ್‌ ಯಾದವ್‌ ತಿಳಿಸಿದ್ದಾರೆ.

‘ಜ್ಞಾನವಾಪಿ ಮಸೀದಿಯು ವಕ್ಫ್‌ ಮಂಡಳಿಗೆ ಸೇರಿರುವ ಆಸ್ತಿ. ಹಾಗಾಗಿ ಈ ಮೊಕದ್ದಮೆ ಕುರಿತು ವಾದ ಆಲಿಸುವ ಹಕ್ಕು ನ್ಯಾಯಾಲಯಕ್ಕೆ ಇಲ್ಲ ಎಂದು ಈ ಪ್ರಕರಣದಲ್ಲಿ ಮಸೀದಿ ಸಮಿತಿ ಪರ ವಕೀಲರಾಗಿರುವ ಶಮೀಮ್‌ ಅಹಮದ್‌ ಅವರು ಹೇಳಿದರು. ಶಮೀಮ್‌ ಅವರು ಹಳೇ ಹೇಳಿಕೆಯನ್ನೇ ಪುನರುಚ್ಚರಿಸಿದರು. ಅವರು ಕೋರ್ಟ್‌ಗೆ ಒದಗಿಸಿದ ದಾಖಲೆಗಳಲ್ಲಿ ಅಲಾಂಗಿರ್‌ ಮಸೀದಿಗೆ ಸಂಬಂಧಿಸಿದ ದಾಖಲೆಯೂ ಸೇರಿತ್ತು’ ಎಂದು ಯಾದವ್‌ ಹೇಳಿದ್ದಾರೆ.

ADVERTISEMENT

ವಕ್ಫ್‌ ಮಂಡಳಿ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವೆ 1992ರಲ್ಲಿ ಒಪ್ಪಂದ ನಡೆದು, ಜ್ಞಾನವಾಪಿ ಮಸೀದಿಯ ಒಂದು ಭಾಗವನ್ನು ಪೊಲೀಸ್‌ ಠಾಣೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಾಣ ವೇಳೆ ಮಸೀದಿಗೆ ಸೇರಿದ ಭೂಮಿಯ ಕೆಲಭಾಗವನ್ನು ಸರ್ಕಾರ ಒತ್ತುವರಿ ಮಾಡಿಕೊಂಡಿತ್ತು ಮತ್ತು ಅದರ ಬದಲಾಗಿ ಬೇರೆಡೆ ಭೂಮಿಯನ್ನು ನೀಡಿದೆ. ಜ್ಞಾನವಾಪಿ ಮಸೀದಿ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಶಮೀಮ್‌ ವಾದ ಮಂಡಿಸಿದರು ಎಂದು ಯಾದವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.