ನವದೆಹಲಿ: ಸಣ್ಣ ಉಪಗ್ರಹ ಉಡಾವಣಾ ವಾಹಕ (ಎಸ್‌ಎಸ್‌ಎಲ್‌ವಿ) ತಂತ್ರಜ್ಞಾನದ ವರ್ಗಾವಣೆಯ ಬಿಡ್ ಪಡೆಯುವ ಮೂಲಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಹತ್ತರ ಪ್ರಗತಿ ಸಾಧಿಸಿದೆ.
ಭೂಮಿಯ ಕಕ್ಷೆಯ ಕೆಳಭಾಗದಲ್ಲಿ 500 ಕೆ.ಜಿ. ತೂಕದವರೆಗಿನ ಉಪಗ್ರಹಗಳನ್ನು ಇಸ್ರೊ ರಾಕೆಟ್ ಮೂಲಕ ಉಡಾವಣೆ ಮಾಡಲು ಈ ತಂತ್ರಜ್ಞಾನ ನೆರವಾಗಲಿದೆ.
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಯೋಜನೆ ಹಾಗೂ ಅಧಿಕಾರ ಕೇಂದ್ರದ ಮುಖ್ಯಸ್ಥ ಪವನ್ ಗೋಯೆಂಕಾ ಅವರು ವರ್ಚುವಲ್ ಪತ್ರಿಕಾಗೋಷ್ಠಿ ಮೂಲಕ ಈ ಘೋಷಣೆ ಮಾಡಿದರು.
ಅದಾನಿ ಡಿಫೆನ್ಸ್ ಸಿಸ್ಟಂ ಹಾಗೂ ಟೆಕ್ನಾಲಜೀಸ್ ಬೆಂಬಲಿತ ಅಲ್ಫಾ ಡಿಸೈನ್ ಹಾಗೂ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆಗಳನ್ನು ಹಿಂದಿಕ್ಕಿ ಬೆಂಗಳೂರು ಮೂಲದ ಎಚ್‌ಎಎಲ್ ಸಂಸ್ಥೆಯು ಸ್ವತಂತ್ರವಾಗಿ ಬಿಡ್ ಸಲ್ಲಿಸಿ, ಈ ಅವಕಾಶವನ್ನು ಪಡೆದುಕೊಂಡಿದೆ.
‘ಎಚ್‌ಎಎಲ್ ಜೊತೆಗೂಡಿ, ಇಸ್ರೊ ಸಂಸ್ಥೆಯು ಈಗಿನ ವಿನ್ಯಾಸದಲ್ಲಿಯೇ ಎರಡು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಮೂರನೇ ರಾಕೆಟ್ ನಿರ್ಮಾಣ ವೇಳೆ ಈಗಿರುವ ವಿನ್ಯಾಸವನ್ನು ಸುಧಾರಿಸಲು ಎಚ್‌ಎಎಲ್ ಸಂಪೂರ್ಣ ಸ್ವಾತಂತ್ರ್ಯ ಹೊಂದಿದೆ’ ಎಂದು ಗೋಯೆಂಕಾ ಸ್ಪಷ್ಟಪಡಿಸಿದರು.
‘ಎಸ್‌ಎಸ್‌ಎಲ್‌ವಿ ತಯಾರಿಕೆ ಬಿಡ್ ಪಡೆದಿರುವುದು ಎಚ್‌ಎಎಲ್ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ’ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕ ಬಿ.ಸೇನಾಪತಿ ತಿಳಿಸಿದರು.
ತುರ್ತು ಸಂದರ್ಭ, ರಕ್ಷಣಾ ಪಡೆಗಳಿಗೆ ನೆರವಾಗುವ ಉದ್ದೇಶದಿಂದ ಭೂಮಿಯ ಕೆಳಕಕ್ಷೆಗೆ ಸಣ್ಣ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿ, ಎಸ್‌ಎಸ್‌ಎಲ್‌ವಿನ ಮೂಲಕ ಉಡಾವಣೆ ಮಾಡಲಾಗುತ್ತದೆ. ಉಪಗ್ರಹಗಳ ತೂಕವು 10 ಕೆ.ಜಿಯಿಂದ 500 ಕೆ.ಜಿಯವರೆಗೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.