ADVERTISEMENT

CDS ಮೂಲಕ ಮಹಿಳೆಯರಿಗೂ ಅವಕಾಶ: 8 ವಾರದಲ್ಲಿ ನಿರ್ಧರಿಸುವಂತೆ ಕೇಂದ್ರಕ್ಕೆ ಆದೇಶ

ಪಿಟಿಐ
Published 27 ಏಪ್ರಿಲ್ 2024, 15:51 IST
Last Updated 27 ಏಪ್ರಿಲ್ 2024, 15:51 IST
ದೆಹಲಿ ಹೈಕೋರ್ಟ್‌ 
ದೆಹಲಿ ಹೈಕೋರ್ಟ್‌    

ನವದೆಹಲಿ: ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಹುದ್ದೆಗಳಿಗೆ ಸೇರಲು ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (ಸಿಡಿಎಸ್‌) ಮೂಲಕ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ, ಎಂಟು ವಾರಗಳಲ್ಲಿ ನಿರ್ಧಾರ ಪ್ರಕಟಿಸಬೇಕೆಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದೆ.

2023ರ ಡಿಸೆಂಬರ್‌ನಲ್ಲಿ ಭಾರತೀಯ ಭೂಸೇನೆ ಅಕಾಡೆಮಿ (ಐಎಂಎ), ನೌಕಾಸೇನೆ ಅಕಾಡೆಮಿ (ಐಎನ್‌ಎ), ವಾಯುಸೇನೆ ಅಕಾಡೆಮಿ (ಐಎಫ್‌) ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಗಳಿಗೆ (ಒಟಿಎ) ಸಿಡಿಎಸ್‌ ಮೂಲಕ ಪರೀಕ್ಷೆ ನಡೆಸಲಿರುವ ಅಧಿಸೂಚನೆಯನ್ನು ಯುಪಿಎಸ್‌ಸಿ ಹೊರಡಿಸಿತ್ತು.

ಅಧಿಸೂಚನೆಯನ್ನು ಪ್ರಶ್ನಿಸಿ ಖುಶ್‌ ಕಾಲ್ರಾ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಈ ಆದೇಶ ಹೊರಡಿಸಿದೆ.

ADVERTISEMENT

ಇದೇ ವಿಷಯದಲ್ಲಿ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿರುವ ಅಹವಾಲು ಇನ್ನೂ ಇತ್ಯರ್ಥವಾಗಿಲ್ಲ ಎಂಬುದನ್ನೂ ಪರಿಗಣನೆಗೆ ತೆಗೆದುಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ಅರೋರಾ ಅವರಿದ್ದ ಪೀಠವು, ‘ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಕಾನೂನಿನ ಅನುಸಾರವಾಗಿ ಎಂಟು ವಾರಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಬೇಕು’ ಎಂದು ಆದೇಶ ನೀಡಿ, ಅರ್ಜಿಯನ್ನು ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.