ADVERTISEMENT

ಪತ್ನಿ ಸುಪರ್ದಿಗೆ ‘ಅಪ್ರಾಪ್ತ ಪತಿ’; ಅಲಹಾಬಾದ್ ಹೈಕೋರ್ಟ್‌ ನಿರಾಕರಣೆ

ಪಿಟಿಐ
Published 15 ಜೂನ್ 2021, 17:41 IST
Last Updated 15 ಜೂನ್ 2021, 17:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಲಹಾಬಾದ್‌: ‘ಅಪ್ರಾಪ್ತಪತಿ’ಯನ್ನು ಪತ್ನಿಯ ಸುಪರ್ದಿಗೆ ನೀಡಿ ಆದೇಶಿಸಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ.

‘ಅಪ್ರಾಪ್ತ ಬಾಲಕ ಹಾಗೂ ಮಹಿಳೆಯ ಮದುವೆ ಅನೂರ್ಜಿತ. ಪತ್ನಿಯ ಸುಪರ್ದಿಗೆ ‘ಅಪ್ರಾಪ್ತ ಪತಿ’ಯನ್ನು ನೀಡಿದ್ಧೇಯಾದರೆ, ಪ್ರಾಯಕ್ಕೆ ಬಂದ ವ್ಯಕ್ತಿ ಹಾಗೂ ಅಪ್ರಾಪ್ತನ ಸಹಜೀವನಕ್ಕೆ ಒಪ್ಪಿಗೆ ನೀಡಿದಂತಾಗುತ್ತದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

‘16 ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಇರಲೂ ಒಪ್ಪುತ್ತಿಲ್ಲ. ಪತ್ನಿ ಅಥವಾ ತಾಯಿಯ ವಶಕ್ಕೆ ಬಾಲಕನನ್ನು ಒಪ್ಪಿಸುವಂತೆ ಸೂಚನೆ ನೀಡಲಾಗದು. ಹೀಗಾಗಿ ಬಾಲಕನ ವಾಸ್ತವ್ಯಕ್ಕೆ ರಾಜ್ಯ ಸರ್ಕಾರದ ಬಾಲಮಂದಿರದಲ್ಲಿ ವ್ಯವಸ್ಥೆ ಮಾಡಬೇಕು’ ಎಂದು ನ್ಯಾಯಮೂರ್ತಿ ಜೆ.ಜೆ.ಮುನೀರ್‌ ನಿರ್ದೇಶನ ನೀಡಿದರು.

ADVERTISEMENT

‘ಪ್ರಾಯಕ್ಕೆ ಬಂದ ಮಹಿಳೆ ಹಾಗೂ ಬಾಲಕ ಸಹಜೀವನ ನಡೆಸುವುದು ಪೋಕ್ಸೊ ಕಾಯ್ದೆ ಪ್ರಕಾರ ಅಪರಾಧ’ ಎಂದೂ ಹೇಳಿದರು.

‘2022ರ ಫೆಬ್ರುವರಿ 4ರಂದು ಬಾಲಕ ಪ್ರಾಯಕ್ಕೆ ಬರಲಿದ್ದು, ನಂತರ ಆತ ತಾನು ಇಷ್ಟಪಟ್ಟವರೊಂದಿಗೆ ಬದುಕಬಹುದು’ ಎಂದು ನ್ಯಾಯಮೂರ್ತಿ ಮುನೀರ್‌ ಹೇಳಿದರು.

ಅಜಮ್‌ಗಡದ ಮಹಿಳೆಯೊಬ್ಬರು, ‘ತನ್ನ ಮಗನಿಗೆ ಮದುವೆಯಾಗುವ ವಯಸ್ಸು ಆಗಿಲ್ಲ. ಹೀಗಾಗಿ ಆತನ ಮದುವೆಯನ್ನು ಅನೂರ್ಜಿತಗೊಳಿಸಿ, ಆತನನ್ನು ನನ್ನ ಸುಪರ್ದಿಗೆ ನೀಡಬೇಕು’ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ವೇಳೆ, ‘ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ನನಗೆ ಪತ್ನಿಯೊಂದಿಗೆ ಇರಲು ಅನುಮತಿ ನೀಡಬೇಕು’ ಎಂದು ಬಾಲಕ ಮನವಿ ಮಾಡಿದ್ದ. ಆದರೆ, ನ್ಯಾಯಾಲಯ ಆತನ ಮನವಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.