ADVERTISEMENT

ವಕೀಲರ ಮುಷ್ಕರ: ನಡೆಯದ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ

ಪಿಟಿಐ
Published 18 ಮೇ 2022, 15:43 IST
Last Updated 18 ಮೇ 2022, 15:43 IST
ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ  –ಪಿಟಿಐ ಚಿತ್ರ 
ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ –ಪಿಟಿಐ ಚಿತ್ರ    

ವಾರಾಣಸಿ: ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ವಿರೋಧಿಸಿ ಜಿಲ್ಲೆಯಲ್ಲಿ ವಕೀಲರು ಮುಷ್ಕರ ನಡೆಸುತ್ತಿರುವ ಕಾರಣ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ಬುಧವಾರ ಇಲ್ಲಿನ ನ್ಯಾಯಾಲಯದಲ್ಲಿ ನಡೆಯಲಿಲ್ಲ.

‘ಬನಾರಸ್ ಬಾರ್ ಅಸೋಸಿಯೇಷನ್ ಮತ್ತು ವಾರಾಣಸಿಯ ಸೆಂಟ್ರಲ್ ಬಾರ್ ಅಸೋಸಿಯೇಷನ್‌ನ ವಕೀಲರ ವಿರುದ್ಧ ಸರ್ಕಾರದ ಕಾರ್ಯದರ್ಶಿಯು ನೀಡಿದ್ದ ಹೇಳಿಕೆಯಿಂದ ವಕೀಲರು ಅಸಮಾಧಾನಗೊಂಡಿದ್ದರು. ಹಾಗಾಗಿ, ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ವಕೀಲರು ಮುಷ್ಕರ ನಡೆಸಿದರು. ಇದರಿಂದ ಬುಧವಾರ ನ್ಯಾಯಾಲಯದಲ್ಲಿ ಮಸೀದಿ ಪ್ರಕರಣದ ವಿಚಾರಣೆ ನಡೆಯಲಿಲ್ಲ’ ಎಂದು ಮುಸ್ಲಿಮರ ಪರ ವಕೀಲರಾದ ಅಭಯ್ ಯಾದವ್ ತಿಳಿಸಿದರು.

‘ಇಡೀ ದೇಶದ ದೃಷ್ಟಿ ಜ್ಞಾನವಾಪಿ ಮಸೀದಿ ಪ್ರಕರಣದ ಮೇಲಿರುವುದರಿಂದ ಬುಧವಾರದಂದು ವಕೀಲರು ವಿಚಾರಣೆಯಲ್ಲಿ ಭಾಗವಹಿಸಲು ವಕೀಲರಿಗೆ ಅವಕಾಶ ನೀಡಬೇಕೆಂದು ವಕೀಲರನ್ನು ಒತ್ತಾಯಿಸಿದ್ದೆವು. ಆದರೆ, ಅದು ಫಲ ನೀಡಲಿಲ್ಲ’ ಎಂದು ಹಿಂದೂಗಳ ಪರ ವಕೀಲರಾದ ಮದನ್ ಮೋಹನ್ ಯಾದವ್ ಹೇಳಿದರು.

ADVERTISEMENT

‘ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ಮುಂದೆ ಮುಸ್ಲಿಂ ಕಡೆಯವರು ಅರ್ಜಿ ಸಲ್ಲಿಸಿದ್ದು, ಹಿಂದೂ ಕಡೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಎರಡು ದಿನಗಳ ಕಾಲಾವಕಾಶ ನೀಡಬೇಕು’ ಎಂದು ಯಾದವ್ ಹೇಳಿದರು. ನ್ಯಾಯಾಲಯವು ಪುನಃ ಪ್ರಾರಂಭವಾದಾಗ ಪ್ರಕರಣದ ವಿಚಾರಣೆ ನಡೆಯಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.