ಭಾರಿ ಮಳೆಯಿಂದಾಗಿ ಕೇರಳದ ಇಡುಕ್ಕಿಯಲ್ಲಿ ಗುರುವಾರ ರಸ್ತೆ ಮೇಲೆಯೇ ಬುಡಸಮೇತವಾಗಿ ಮುರಿದು ಬಿದ್ದ ಮರಗಳು ಪಿಟಿಐ ಚಿತ್ರ
ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದ್ದು, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಗುರುವಾರ ರಾಜ್ಯದ ಎಂಟು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.
ಪತ್ತನಂತಿಟ್ಟ, ಕೋಟಯಂ, ಎರ್ನಾಕುಳಂ, ಇಡುಕ್ಕಿ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಗುರುವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಇಡುಕ್ಕಿ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಶುಕ್ರವಾರವೂ ‘ರೆಡ್ ಅಲರ್ಟ್’ ಘೋಷಿಸಲಾಗಿದ್ದು, ಉಳಿದ 11 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿ. ರಾಜ್ಯದ ಕೆಲವು ಭಾಗಗಳಲ್ಲಿ ಗಂಟೆಗೆ 40-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಕೆಲವು ದಿನಗಳು ಕೇರಳದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಗುರುವಾರ ತಿಳಿಸಿದೆ.
‘ಭಾರಿ ಮಳೆಯಿಂದಾಗಿ, ರಾಜ್ಯದ ವಿವಿಧ ನದಿಗಳಲ್ಲಿನ ನೀರಿನ ಮಟ್ಟ ಸ್ಥಿರವಾಗಿ ಏರುತ್ತಿದೆ. ನದಿ ದಡದಲ್ಲಿ ವಾಸಿಸುತ್ತಿರುವವರು ಎಚ್ಚರಿಕೆ ವಹಿಸಬೇಕು’ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.
ಗಾಳಿ ಮತ್ತು ಮಳೆಯಿಂದಾಗಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಯನಾಡ್ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ನೂರಾರು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ನಿಗದಿತ ಸಮಯಕ್ಕಿಂತ ಎಂಟು ದಿನ ಮುಂಚಿತವಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ.
ಆಂಧ್ರದಲ್ಲೂ ಮಳೆ: ಶನಿವಾರದವರೆಗೆ ಆಂಧ್ರಪ್ರದೇಶದ ಹಲವೆಡೆ ವೇಗವಾಗಿ ಗಾಳಿ ಬೀಸುವ ಸಾಧ್ಯತೆ ಇದ್ದು, ಜೋರು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರ: ಐದು ದಿನಗಳಲ್ಲಿ 16 ಸಾವು
ಕಳೆದ ಐದು ದಿನಗಳಲ್ಲಿ ಭೂಕುಸಿತ ಸಿಡಿಲು ಮರ ಅಥವಾ ಕಟ್ಟಡ ಕುಸಿತದಂತಹ ಮಳೆ ಸಂಬಂಧಿತ ಅವಘಡಗಳಿಂದ ಮಹಾರಾಷ್ಟ್ರದಲ್ಲಿ 16 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರವು ವರದಿ ಮಾಡಿದೆ. ಮೇ 24ರಿಂದ ಮಳೆ ಸಂಬಂಧಿತ ಅವಘಡದಲ್ಲಿ 18 ಜನರಿಗೆ ಗಾಯಗಳಾಗಿದ್ದು 41 ಪ್ರಾಣಿಗಳು ಮೃತಪಟ್ಟಿವೆ. ಭಾರಿ ಮಳೆಯಿಂದಾಗಿ ರಾಜ್ಯದ ಬಹುತೇಕ ಭಾಗಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ. ಲಾತೂರ್‌ನಲ್ಲಿ ಕಳೆದ 25 ವರ್ಷಗಳಲ್ಲೇ ಅಧಿಕ ಮಳೆಯಾಗಿದೆ (4.6 ಸೆಂ.ಮೀ.) ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.