ADVERTISEMENT

ಭಾರತದಲ್ಲಿ ಮಾರಾಟವಾಗುವ ಬಹುತೇಕ ಬ್ರ್ಯಾಂಡ್‌ಗಳ ಜೇನಿನಲ್ಲಿ ಸಕ್ಕರೆ ಪಾಕವೇ ಹೆಚ್ಚು

ಭಾರಿ ಕಲಬೆರಕೆ ದಂಧೆ: ಭಾರತದ ಪರೀಕ್ಷೆಯಲ್ಲಿ ಪತ್ತೆಯೇ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 3:11 IST
Last Updated 3 ಡಿಸೆಂಬರ್ 2020, 3:11 IST
ಪ್ರಾತಿನಿಧಿಕ ಚಿತ್ರ (iStock)
ಪ್ರಾತಿನಿಧಿಕ ಚಿತ್ರ (iStock)   

ನವದೆಹಲಿ: ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವ ಜೇನುತುಪ್ಪ ಬ್ರ್ಯಾಂಡ್‌ಗಳಲ್ಲಿ ಹೆಚ್ಚಿನವು ಕಲಬೆರಕೆ ಜೇನನ್ನೇ ಮಾರುತ್ತಿವೆ ಎಂಬ ಅಂಶವು ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸಿಎಸ್‌ಇ) ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು ಜೇನಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವು ಈ ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದ ಮಾರುಕಟ್ಟೆಗಳಿಂದ 13 ಬ್ರ್ಯಾಂಡ್‌ಗಳ ಜೇನನ್ನು ಸಿಎಸ್‌ಇ ಖರೀದಿ ಮಾಡಿತ್ತು. ಅವುಗಳನ್ನು ಗುಜರಾತ್‌ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಆದರೆ, ಒಂದು ಬ್ರ್ಯಾಂಡ್‌ ಬಿಟ್ಟರೆ ಬೇರೆಲ್ಲವೂ ಶುದ್ಧ ಜೇನು ಎಂಬ ಫಲಿತಾಂಶವೂ ಬಂದಿತ್ತು.

ಸಿಎಸ್‌ಇ ಅಲ್ಲಿಗೆ ಸುಮ್ಮನಾಗಲಿಲ್ಲ. ವಿವಿಧ ಬ್ರ್ಯಾಂಡ್‌ಗಳ ಜೇನನ್ನು ಹೆಚ್ಚು ಪರಿಪೂರ್ಣವಾದ ನ್ಯೂಕ್ಲಿಯರ್‌ ಮ್ಯಾಗ್ನೆಟಿಕ್‌ ರೆಸೊನೆನ್ಸ್‌ (ಎನ್‌ಎಂಆರ್‌) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿತು. ಮುಂದುವರಿದ ದೇಶಗಳಲ್ಲಿ ಜೇನಿನ ಪರಿಶುದ್ಧತೆ ಪರಿಶೀಲನೆಗೆ ಈ ಪರೀಕ್ಷೆಯನ್ನೇ ನಡೆಸಲಾಗುತ್ತದೆ. ಪರೀಕ್ಷೆಗೆ ಒಳಗಾದ 13 ಬ್ರ್ಯಾಂಡ್‌ಗಳ ಪೈಕಿ 10 ಬ್ರ್ಯಾಂಡ್‌ಗಳ ಜೇನು ಶುದ್ಧವಲ್ಲ ಎಂಬ ಫಲಿತಾಂಶವನ್ನು ಈ ಪರೀಕ್ಷೆಯು ನೀಡಿತು. ಜರ್ಮನಿಯ ಪ್ರಯೋಗಾಲಯವೊಂದರಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

ADVERTISEMENT

ಭಾರತದಲ್ಲಿ ನಿಗದಿಪಡಿಸಲಾದ ಮಾನದಂಡದ ಪರೀಕ್ಷೆಯಲ್ಲಿ ಜೇನು ಪರಿಶುದ್ಧವೇ ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಏಕೆಂದರೆ, ಚೀನಾದ ಕಂಪನಿಗಳು ತಯಾರಿಸುವ ವಿಶೇಷ ಸಕ್ಕರೆ ಪಾಕವನ್ನು ಈ ಪರೀಕ್ಷೆಯು ಜೇನು ಎಂದೇ ಗುರುತಿಸುತ್ತದೆ.

‘ಇದು ಅತ್ಯಂತ ದುಷ್ಟ ಮತ್ತು ಆಧುನಿಕವಾದ ಆಹಾರ ವಂಚನೆ ವಿಧಾನ. 2003 ಮತ್ತು 2006ರಲ್ಲಿ ತಂಪು ಪಾನೀಯಗಳ ಪರೀಕ್ಷೆಯಲ್ಲಿ ದೊರಕಿದ್ದಕ್ಕಿಂತ ಹೆಚ್ಚು ಅಪಾಯಕಾರಿ ಫಲಿತಾಂಶ ಇದು. ನಮ್ಮ ಆರೋಗ್ಯದ ಮೇಲೆ ಈವರೆಗೆ ಕಂಡುಕೊಂಡದ್ದಕ್ಕಿಂತ ಹೆಚ್ಚು ಅಪಾಯ ಉಂಟು ಮಾಡಬಹುದು’ ಎಂದು ಸಿಎಸ್‌ಇ ಪ್ರಧಾನ ನಿರ್ದೇಶಕಿ ಸುನಿತಾ ನಾರಾಯಣ್‌ ಹೇಳಿದ್ದಾರೆ.

ಭಾರತದ ಜೇನು ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬಹುದಾದ ಸಕ್ಕರೆ ಪಾಕ ಇದೆಯೇ ಮತ್ತು ಅದನ್ನು ಕಳುಹಿಸಿಕೊಡಬಹುದೇ ಎಂದು ಕೋರಿ ಚೀನಾದ ಕಂಪನಿಗಳಿಗೆ ಸಿಎಸ್‌ಇ ಇ–ಮೇಲ್‌ ಕಳುಹಿಸಿತ್ತು. ಅಂತಹ ಸಕ್ಕರೆ ಪಾಕ ಲಭ್ಯ ಇದೆ ಮತ್ತು ಅದನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿದೆ ಎಂದು ಕಂಪನಿಗಳು ಪ್ರತಿಕ್ರಿಯೆ ನೀಡಿದ್ದವು.

ಜೇನಿಗೆ ಶೇ 50ರಿಂದ ಶೇ 80ರಷ್ಟು ಸಕ್ಕರೆ ಪಾಕ ಬೆರೆಸಿದರೂ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬಹುದು ಎಂದು ಕಂಪನಿಗಳು ಹೇಳಿದ್ದವು. ಕಸ್ಟಮ್ಸ್‌ ತಪಾಸಣೆಯಲ್ಲಿ ಸಿಕ್ಕಿ ಬೀಳದೇ ಇರುವುದಕ್ಕಾಗಿ ‘ಪೇಂಟ್‌ನಲ್ಲಿ ಬಳಸುವ ದ್ರವ’ ಎಂಬ ಹೆಸರಿನಲ್ಲಿ ಸಕ್ಕರೆ ಪಾಕದ ಮಾದರಿಯನ್ನು ಚೀನಾದ ಕಂಪನಿಯೊಂದು ಕಳುಹಿಸಿತ್ತು.

ಸಕ್ಕರೆ ಪಾಕವನ್ನು ತಯಾರಿಸುವ ಕಾರ್ಖಾನೆಯೊಂದನ್ನು ಉತ್ತರಾಖಂಡದ ಜಸ್ಪುರದಲ್ಲಿ ಸಿಎಸ್‌ಇ ಪತ್ತೆ ಮಾಡಿದೆ. ಅಲ್ಲಿಂದಲೂ ಸಕ್ಕರೆ ಪಾಕದ ಮಾದರಿಯನ್ನು ಸಂಗ್ರಹಿಸಿದೆ.

ಸಿಎಸ್‌ಇ ಮತ್ತೊಂದು ಪರೀಕ್ಷೆಯನ್ನೂ ನಡೆಸಿದೆ.‘ಶುದ್ಧವಾದ ತುಪ್ಪಕ್ಕೆ ಸಕ್ಕರೆ ಪಾಕವನ್ನು ಸೇರಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಜೇನಿನಲ್ಲಿ ಶೇ 25ರಿಂದ ಶೇ 50ರವರೆಗೆ ಸಕ್ಕರೆ ಪಾಕ ಇದ್ದರೂ ಶುದ್ಧ ಜೇನು ಎಂಬ ಫಲಿತಾಂಶ ಬಂದಿತ್ತು. ಭಾರತದ ಆಹಾರ ಗುಣಮಟ್ಟ ಮಾನದಂಡಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಸಕ್ಕರೆ ಪಾಕ ಇದೆ ಎಂಬುದು ಖಚಿತ’ ಎಂದು ಸಿಎಸ್‌ಇ ಆಹಾರ ಸುರಕ್ಷತೆ ವಿಭಾಗದ ಕಾರ್ಯಕ್ರಮ ನಿರ್ದೇಶಕ ಅಮಿತ್‌ ಖುರಾನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.