ADVERTISEMENT

ಜಿಯೋ ಇನ್‌ಸ್ಟಿಟ್ಯೂಟ್‌ ಹೇಗೆ ’ಐಒಇ’ ಮನ್ನಣೆ ಪಡೆಯಿತು? ಸರ್ಕಾರ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 11:54 IST
Last Updated 11 ಜುಲೈ 2018, 11:54 IST
   

ನವದೆಹಲಿ: ಕೇಂದ್ರ ಸರ್ಕಾರ, ರಿಲಯನ್ಸ್‌ ಪ್ರತಿಷ್ಠಾನದ ಜಿಯೊ ಇನ್ಸ್‌ಟಿಟ್ಯೂಟ್‌ ಸೇರಿದಂತೆ 6 ಸಂಸ್ಥೆಗಳಿಗೆ ‘ಉತ್ಕೃಷ್ಟ ಸಂಸ್ಥೆ’ (ಐಒಇ) ಮನ್ನಣೆ ನೀಡಿದೆ. ಈ ಮನ್ನಣೆ ಸಂಪೂರ್ಣ ಸ್ವಾಯತತ್ತೆಯನ್ನು ಖಾತರಿಪಡಿಸುವುದಲ್ಲದೆ, ಜಾಗತಿಕವಾಗಿ ಶ್ರೇಯಾಂಕ ಗುರುತಿಸಲು ಸಹಕಾರಿಯಾಗಲಿದೆ.

ಜಿಯೋ ಇನ್‌ಸ್ಟಿಟ್ಯೂಟ್‌ ಸೇರಿದಂತೆ ಇತರೆ 5 ಸಂಸ್ಥೆಗಳಾದ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಪ್‌ ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌ ಹಾಗೂ ಮಣಿಪಾಲ್‌ ಆಕಾಡೆಮಿ ಆಪ್‌ ಹೈಯರ್ ಎಜುಕೇಶನ್‌ ಸಂಸ್ಥೆಗಳಿಗೆ ಉತ್ಕೃಷ್ಟ ಸಂಸ್ಥೆ ಮನ್ನಣೆ ದೊರೆತಿದೆ.ಜಿಯೋ ಇನ್‌ಸ್ಟಿಟ್ಯೂಟ್‌ ಹೊರತುಪಡಿಸಿದರೆ ಈ ಎಲ್ಲಾ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀವೆ. ಆದರೆಇನ್ನಷ್ಟೇ ಆರಂಭವಾಗಬೇಕಿರುವಜಿಯೋ ಇನ್‌ಸ್ಟಿಟ್ಯೂಟ್‌ಗೆ ಈ ಸ್ಥಾನ ನೀಡಿದ್ದಕ್ಕೆ ಜನರು, ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಐಐಎಸ್ಸಿ ಬೆಂಗಳೂರಿನ ಪ್ರಾಧ್ಯಾ ಪಕರೊಬ್ಬರು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಆವರಿಗೆ ಟ್ವೀಟ್‌ ಮಾಡಿದ್ದು,ಐಐಟಿಎಮ್ ಅಥವಾ ಐಐಟಿ ಕೆಜಿಪಿ ಅಥವಾ ಇತರೆ ಸಂಸ್ಥೆಗಳಿಗಿಂತ ಉತ್ತಮವೆಂದು ನಿರ್ಧರಿಸಲು ಜಿಯೊ ಇನ್ಸ್‌ಟಿಟ್ಯೂಟ್‌ ಅನ್ನು ಹೇಗೆ ಮೌಲ್ಯಮಾಪನ ಮಾಡಿದರು? ಸ್ಥಾಪನೆ ಪ್ರಕ್ರಿಯೆಯಲ್ಲಿರುವ ಸಂಸ್ಥೆಯನ್ನು ಹೇಗೆಉತ್ಕೃಷ್ಟ ಸಂಸ್ಥೆ ಎಂದು ಪ್ರಕಟಿಸಲಾಯಿತು? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮತ್ತು ಬ್ಲಾಗ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿರುವ ಲಕ್ಷಾಂತರ ಜನರ ಭಾವನೆಗಳನ್ನು ಈ ಪ್ರಾಧ್ಯಪಕರ ಪ್ರಶ್ನೆಗಳು ಪ್ರತಿಧ್ವನಿಸಿವೆ ಎಂದು ಬ್ಯುಜಿನೆಸ್‌ಟುಡೆ ಸುದ್ದಿ ತಾಣ ವರದಿ ಮಾಡಿದೆ.

ADVERTISEMENT

ಈ ಕುರಿತಂತೆಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ವಿವರಣೆ ನೀಡುವುದರ ಜತೆಗೆ ತನ್ನ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದೆ. ಹೊಸ ಉಪಕ್ರಮಗಳು ಎಂಬ ವಿಭಾಗದ ಅಡಿಯಲ್ಲಿ ಜಿಯೊ ಇನ್ಸ್‌ಟಿಟ್ಯೂಟ್‌ ಅನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ 4 ಮಾನದಂಡಗಳನ್ನು ಇರಿಸಲಾಗಿತ್ತು. ಜಾಗತಿಕ ಗುಣಮಟ್ಟವನ್ನು ಭಾರತಕ್ಕೆ ತರುವ ಜವಾಬ್ದಾರಿಯುತ ಹೂಡಿಕೆದಾರರಿಗೆ ಸ್ವಾಗತವಿದೆ ಎಂದು ಅದರಲ್ಲಿ ಹೇಳಲಾಗಿದೆ.

ಸಂಸ್ಥೆಯ ನಿರ್ಮಾಣಕ್ಕೆ ಬೇಕಾಗಿರುವ ಭೂಮಿಯ ಲಭ್ಯತೆ, ಉತ್ತಮ ಅರ್ಹತೆ ಮತ್ತು ಅಪಾರ ಅನುಭವ ಹೊಂದಿರುವ ಮುಖ್ಯ ತಂಡ, ಸಂಸ್ಥೆಯನ್ನು ಸ್ಥಾಪಿಸಲು ಮತ್ತು ಮುನ್ನಡೆಸಲು ಬೇಕಾಗಿರುವ ಹಣಕಾಸು, ಪ್ರಗತಿಯ ದೃಷ್ಟಿಕೋನ ಮತ್ತು ಸ್ಪಷ್ಟ ಕ್ರಿಯಾ ಯೋಜನೆ ಹೊಂದಿರುವ ಕಾರ್ಯತಂತ್ರ ಎಂಬ 4 ಮಾನದಂಡಗಳನ್ನು ಇರಿಸಲಾಗಿತ್ತು. ಹೊಸ ಉಪಕ್ರಮದ ಅಡಿಯಲ್ಲಿ 11 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಇವುಗಳ ಪೈಕಿ ಈ ನಾಲ್ಕು ಮಾನದಂಡಗಳಿಗೆ ಅನುಗುಣವಾಗಿ ಇದದ್ದು ಜಿಯೊ ಇನ್ಸ್‌ಟಿಟ್ಯೂಟ್‌ ಮಾತ್ರ. ಈ ಹಿನ್ನೆಲೆಯಲ್ಲಿಜಿಯೊ ಇನ್ಸ್‌ಟಿಟ್ಯೂಟ್‌ ಸಂಸ್ಥೆ ಸ್ಥಾಪನೆ ಮಾಡಲು ಅನುವು ಮಾಡಿಕೊಡುವ ಪತ್ರ ನೀಡಲಾಗಿದೆ. ಇದು ಖಾಸಗಿಯಾಗಿರುವುದರಿಂದ ಸರ್ಕಾರ ಯಾವುದೇ ರೀತಿಯ ಹಣಕಾಸು ನೆರವು ನೀಡುವುದಿಲ್ಲ ಎಂದು ಎಚ್‌ಆರ್‌ಡಿ ಸ್ಪಷ್ಟಪಡಿಸಿದೆ. ಆದರೆ ‘ಉತ್ಕೃಷ್ಟ ಸಂಸ್ಥೆ’ (ಐಒಇ) ಮನ್ನಣೆ ಪಡೆದಿರುವ ಸರ್ಕಾರಿ ಸಂಸ್ಥೆಗಳು ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂಪಾಯಿ ಆರ್ಥಿಕ ಸಹಾಯ ಪಡೆಯಲಿವೆ.

‘ಉತ್ಕೃಷ್ಟ ಸಂಸ್ಥೆ’ (ಐಒಇ) ಮನ್ನಣೆಗಾಗಿ ಒಟ್ಟು 114 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಸರ್ಕಾರಿ ವಲಯದ 74 ಮತ್ತು ಖಾಸಗಿ ವಲಯದ 40 ಸಂಸ್ಥೆಗಳು ಇದ್ದವು. ಮನ್ನಣೆಗೆಆಯ್ಕೆಯಾಗಿರುವ ಸಂಸ್ಥೆಗಳು ಮುಂದಿನ10 ವರ್ಷಗಳಲ್ಲಿ ವಿಶ್ವ ಶ್ರೇಯಾಂಕ 500ರ ಒಳಗೆ ಸ್ಥಾನ ಪಡೆಯಬೇಕು ಎಂಬ ನಿರೀಕ್ಷೆ ಸರ್ಕಾರದಾಗಿದೆ. ಇಲ್ಲಿಯವರೆಗೂ ಭಾರತದ ಯಾವುದೇ ವಿಶ್ವವಿದ್ಯಾಲಯ ವಿಶ್ವ ಶ್ರೇಯಾಂಕ 100 ಒಳಗಿನ ಸ್ಥಾನವನ್ನು ಪಡೆದಿಲ್ಲ.

2016ರಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗಾಗಿ ’ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವುದಾಗಿ ಪ್ರಕಟಿಸಿದ್ದರು. ಇದಕ್ಕಾಗಿ 10 ಖಾಸಗಿ ಮತ್ತು 10 ಸರ್ಕಾರಿ ಸಂಸ್ಥೆಗಳನ್ನು ಗುರುತಿಸುವುದಾಗಿ ಹೇಳಿದ್ದರು. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಾಮಾನ್ಯ ಭಾರತೀಯರಿಗೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದರು.

ಆದಾಗ್ಯೂ ಸರ್ಕಾರ 20 ಸಂಸ್ಥೆಗಳನ್ನು ಉನ್ನತೀಕರಿಸಲು ಯೋಜಿಸಿದೆ. ಇವುಗಳಲ್ಲಿ 10 ಖಾಸಗಿ ಮತ್ತು 10 ಸರ್ಕಾರಿ ಸಂಸ್ಥೆಗಳು ಸೇರಿವೆ. ಈ ಸಂಸ್ಥೆಗಳಲ್ಲಿ ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.