ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಅಸಾಧ್ಯ

ಅರಣ್ಯ, ಪರಿಸರ ಸಚಿವಾಲಯ ಸಮ್ಮತಿ ಅನುಮಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:58 IST
Last Updated 28 ಡಿಸೆಂಬರ್ 2018, 19:58 IST
   

ನವದೆಹಲಿ: ಅರಣ್ಯ ಮತ್ತು ಪರಿಸರ ಸಚಿವಾಲಯದ ಸಮ್ಮತಿ ದೊರೆಯುವ ಶಂಕೆ ಮತ್ತು ಕಾನೂನು ಹೋರಾಟ ಸಾಧ್ಯತೆಯ ಕಾರಣ ಕೇಂದ್ರ ಸರ್ಕಾರವು ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಪ್ರಸ್ತಾವನೆಯನ್ನು ಕೈಬಿಡುವ ಇಂಗಿತ ವ್ಯಕ್ತಪಡಿಸಿದೆ.

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಈ ಮಾರ್ಗಕ್ಕೆ ಕೈಹಾಕಿದರೆ ಕಾನೂನು ತೊಡಕುಗಳು ಎದುರಾಗಲಿವೆ. ಪರಿಸರ ಅನುಮತಿ ದೊರೆಯುವ ಸಾಧ್ಯತೆಯೂ ವಿರಳ. ಭೂಸ್ವಾಧೀನ ಪ್ರಕ್ರಿಯೆಯೂ ಸುಲಭವಲ್ಲ. ಹಾಗಾಗಿ ಯೋಜನೆಯನ್ನು ಸಾಕಾರಗೊಳಿಸುವುದು ಅಸಾಧ್ಯ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಗುರುವಾರ ತಮ್ಮನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಯೋಜನೆಗೆ ಪರಿಸರ ಅನುಮತಿ ದೊರೆತರೂ, ಪರಿಸರ ಪ್ರೇಮಿಗಳು ನ್ಯಾಯಾಲಯದ ಮೊರೆಹೋದಲ್ಲಿ, ಕಾನೂನು ಸಮರಕ್ಕೇ ಅನಗತ್ಯವಾಗಿ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಯಾವುದೇ ಅಡ್ಡಿ, ಆತಂಕಗಳಿಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದೇ ಸೂಕ್ತ. ರೈಲು ಮಾರ್ಗಗಳಿಗೆ ಸಂಬಂಧಿಸಿದ ರಾಜ್ಯದ ಇತರೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

ADVERTISEMENT

ಹುಬ್ಬಳ್ಳಿಯೊಂದಿಗೆ ಕರಾವಳಿ ಭಾಗಕ್ಕೆ ಸುಲಭ ಸಂಪರ್ಕ ಕಲ್ಪಿಸುವ 168.28 ಕಿಲೋ ಮೀಟರ್‌ ಅಂತರದ ಈ ಮಾರ್ಗಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾನದಂಡಗಳ ಅನ್ವಯ ಒಪ್ಪಿಗೆ ಪಡೆಯುವಂತೆ ರಾಜ್ಯ ಸರ್ಕಾರ ಮನವಿ ಮಾಡುತ್ತಲೇ ಬಂದಿದೆ.

ಆದರೆ, ಧಾರವಾಡ, ಯಲ್ಲಾಪುರ, ಕಾರವಾರ ಅರಣ್ಯ ವಲಯದಲ್ಲಿ ಹುಲಿ ಮತ್ತು ಆನೆ ಕಾರಿಡಾರ್‌ಗಳಿರುವ 569 ಹೆಕ್ಟೇರ್‌ ಅರಣ್ಯ ಪ್ರದೇಶದ ಸ್ವಾಧೀನ ಪ್ರಕ್ರಿಯೆಗೆ ಅನುಮತಿ ಪಡೆಯುವುದು ಮತ್ತು ಎರಡು ಲಕ್ಷಕ್ಕೂ ಅಧಿಕ ಮರಗಳನ್ನು ತೆರವುಗೊಳಿಸುವುದು ದುಸ್ತರ ಎಂಬುದೂ ಯೋಜನೆ ನನೆಗುದಿಗೆ ಬೀಳಲು ಕಾರಣವಾಗಿದೆ.

ಪ್ರಸ್ತಾವಿತ ರೈಲು ಮಾರ್ಗಕ್ಕೆ 1999ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರೂ, ಪರಿಸರ ಪ್ರೇಮಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಯೋಜನೆಯನ್ನು ವಿರೋಧಿಸಿದ್ದರು. ಕೋರ್ಟ್‌ ನಿರ್ದೇಶನದ ಮೇರೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಯು ಸ್ಥಳ ಪರಿಶೀಲನೆ ಮತ್ತು ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಅಧ್ಯಯನ ನಡೆಸಿ ಯೋಜನೆಯನ್ನು ವಿರೋಧಿಸಿಯೇ ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.