ADVERTISEMENT

ಏಷ್ಯನೆಟ್‌ ನ್ಯೂಸ್‌, ಮೀಡಿಯಾ ಒನ್‌ ಚಾನೆಲ್‌ ಪ್ರಸಾರ ಪುನರಾರಂಭ 

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 13:17 IST
Last Updated 7 ಮಾರ್ಚ್ 2020, 13:17 IST

ನವದೆಹಲಿ: ಕೋಮು ಸಾಮರಸ್ಯ ಕೆಡಿಸುವ ವರದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ, ಮಲಯಾಳಂನ ಎರಡು ಚಾನೆಲ್‌ಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಹಿಂಪಡೆದಿದೆ.

ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಕೋಮುಗಲಭೆಯ ವರದಿಗೆ ಸಂಬಂಧಿಸಿದಂತೆ ಏಷ್ಯನೆಟ್‌ ನ್ಯೂಸ್‌ ಹಾಗೂ ಮೀಡಿಯಾ ಒನ್‌ಚಾನೆಲ್‌ಗಳ ಮೇಲೆ 48 ಗಂಟೆಗಳ ನಿರ್ಬಂಧ(ಶುಕ್ರವಾರ ರಾತ್ರಿ 7.30 ರಿಂದ ಅನ್ವಯವಾಗುವಂತೆ) ಹೇರಿ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿತ್ತು.

‘ವರದಿಯು ಏಕಪಕ್ಷೀಯವಾದಂತಿದೆ ಹಾಗೂ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬೆಂಬಲಿಗರು ನಡೆಸಿದ ವಿದ್ವಂಸಕ ಕೃತ್ಯಗಳನ್ನಷ್ಟೇ ಪ್ರಸಾರ ಮಾಡಲಾಗಿದೆ. ಆರ್‌ಎಸ್‌ಎಸ್‌ ಅನ್ನು ಪ್ರಶ್ನಿಸುವ ವರದಿಯು ದೆಹಲಿ ಪೊಲೀಸರ ವಿರುದ್ಧವೂ ಆರೋಪಗಳನ್ನು ಮಾಡಿದೆ. ಆರ್‌ಎಸ್‌ಎಸ್‌ ಹಾಗೂ ದೆಹಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ಚಾನೆಲ್‌ ವಿಮರ್ಶಿಸಿದೆ’ ಎಂದು ಚಾನೆಲ್‌ಗಳಿಗೆ ಸಚಿವಾಲಯ ನೀಡಿದ್ದ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ADVERTISEMENT

ಶುಕ್ರವಾರ ತಡರಾತ್ರಿ 1.30ಕ್ಕೆ ಏಷ್ಯನೆಟ್ ಹಾಗೂ ಶನಿವಾರ ಬೆಳಗ್ಗೆ 9.30ಕ್ಕೆ ಮೀಡಿಯಾ ಒನ್‌ ಮೇಲಿನ ನಿರ್ಬಂಧ ಹಿಂಪಡೆಯಲಾಗಿದ್ದು, ಚಾನೆಲ್‌ ಪ್ರಸಾರಗೊಳ್ಳುತ್ತಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

‘ನಿರ್ಬಂಧ ಹೇರಿದ ಬಳಿಕ ನಮ್ಮ ಆಡಳಿತ ಮಂಡಳಿಯು ಸಚಿವಾಲಯವನ್ನು ಸಂಪರ್ಕಿಸಿತ್ತು. ನಾವು ಯಾವುದೇ ಕ್ಷಮೆಯನ್ನು ಕೇಳಲಿಲ್ಲ. ನಮ್ಮ ವರದಿ ವಸ್ತುನಿಷ್ಠವಾಗಿತ್ತು’ ಎಂದು ಏಷ್ಯನೆಟ್‌ನ ಸುದ್ದಿ ಸಂಪಾದಕ ಎಂ.ಜಿ.ರಾಧಾಕೃಷ್ಣನ್‌’ ತಿಳಿಸಿದರು.

‘ನಾವು ಯಾರನ್ನೂ ಸಂಪರ್ಕಿಸಿರಲಿಲ್ಲ. ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದೆವು. ಸಚಿವಾಲಯವು ತಾನಾಗಿಯೇ ನಿರ್ಬಂಧ ಹಿಂಪಡೆದಿದೆ’ ಎಂದು ಮೀಡಿಯಾ ಒನ್‌ ಮುಖ್ಯ ಸಂಪಾದಕ ಸಿ.ಎಲ್‌.ಥಾಮಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.