ADVERTISEMENT

ಹಲ್ಲುಗಳ ಸ್ವಚ್ಛತೆಗಾಗಿ ಐಐಎಸ್‌ಸಿಯಿಂದ ಸಣ್ಣ ರೊಬೋಟ್‌ ಅಭಿವೃದ್ಧಿ

ಪಿಟಿಐ
Published 16 ಮೇ 2022, 11:32 IST
Last Updated 16 ಮೇ 2022, 11:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ರೂಟ್‌ಕೆನಾಲ್‌ನಂತಹ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತಹ ಪುಟ್ಟ (ನ್ಯಾನೊ) ರೊಬೋಟ್‌ಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಅಯಸ್ಕಾಂತೀಯ ಕ್ಷೇತ್ರವನ್ನು ಬಳಸಿಕೊಂಡು ನ್ಯಾನೊ ಗಾತ್ರದ ರೊಬೋಟ್‌ಗಳು ದಂತ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ’ ಎಂದು ಐಐಎಸ್‌ಸಿ ಸಂಶೋಧಕರ ತಂಡವು ಅಧ್ಯಯನದಿಂದ ಕಂಡುಕೊಂಡಿದೆ.

ಈ ಸಂಬಂಧ ‘ಅಡ್ವಾನ್ಸ್ಡ್ ಹೆಲ್ತ್‌ಕೇರ್ ಮೆಟೀರಿಯಲ್ಸ್’ ಜರ್ನಲ್‌ನಲ್ಲಿ ಅಧ್ಯಯನದ ಸಾರಾಂಶ ಪ್ರಕಟವಾಗಿದ್ದು, ಸಂಶೋಧಕರು ಕಬ್ಬಿಣ ಲೇಪಿತ ಸಿಲಿಕಾನ್ ಡೈಆಕ್ಸೈಡ್‌ನಿಂದ ಮಾಡಿದ ಹೆಲಿಕಲ್ ನ್ಯಾನೊ ರೊಬೋಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ. ಕಡಿಮೆ ತೀವ್ರತೆಯ ಅಯಸ್ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುವ ಸಾಧನವನ್ನು ಬಳಸಿ ಈ ರೊಬೋಟ್‌ಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅಧ್ಯಯನವು ತಿಳಿಸಿದೆ.

ADVERTISEMENT

‘ಅಧ್ಯಯನದ ಸಂದರ್ಭದಲ್ಲಿ ಹಲ್ಲಿನ ಮಾದರಿಗಳಿಗೆ ಈ ನ್ಯಾನೊ ರೊಬೋಟ್‌ಗಳನ್ನು ಚುಚ್ಚಿ, ಸೂಕ್ಷ್ಮದರ್ಶಕದ ಮೂಲಕ ಅವುಗಳ ಚಾಲನೆಯನ್ನು ಟ್ರ್ಯಾಕ್ ಮಾಡಲಾಯಿತು. ದಂತನಾಳದ ಕೊಳವೆಯಲ್ಲಿನ ಅಂಗಾಂಶದಲ್ಲಿರುವ ಸೂಕ್ಷ್ಮ ಬ್ಯಾಕ್ಟೀರಿಯಾವನ್ನೂ ರೊಬೋಟ್‌ಗಳು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಈಗಿರುವ ದಂತ ವೈದ್ಯಕೀಯ ಕ್ಷೇತ್ರದಲ್ಲಿರುವ ತಂತ್ರಜ್ಞಾನವು ಎಲ್ಲಾ ಬ್ಯಾಕ್ಟೀರಿಯಾವನ್ನು ಕೊಲ್ಲುವಷ್ಟು ಪರಿಣಾಮಕಾರಿಯಾಗಿಲ್ಲ’ ಎಂದು ಐಐಎಸ್‌ಸಿಯ ಇನ್‌ಕ್ಯುಬೇಟೆಡ್ ಸ್ಟಾರ್ಟ್ಅಪ್‌ನ ಸಹ ಸಂಸ್ಥಾಪಕ ಮತ್ತು ನ್ಯಾನೋ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕೇಂದ್ರದ ಸಂಶೋಧನಾ ಸಹಾಯಕ ಷಣ್ಮುಖ ಶ್ರೀನಿವಾಸ್ ‍ಮಾಹಿತಿ ನೀಡಿದ್ದಾರೆ.

ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಯ ಸಂದರ್ಭದಲ್ಲಿ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಪ್ರತಿಜೀವಕಗಳು ಅಥವಾ ರಾಸಾಯನಿಕಗಳೊಂದಿಗೆ ಹಲ್ಲುಗಳನ್ನು ತೊಳೆಯಬೇಕಾಗುತ್ತದೆ. ಆದರೆ, ಈ ಚಿಕಿತ್ಸೆಯ ವೇಳೆಯಲ್ಲಿ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಆದರೆ, ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ನ್ಯಾನೊ ರೊಬೋಟ್‌ಗಳು ಎಲ್ಲಾ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.