ADVERTISEMENT

ಭಾರತ–ಪಾಕ್ ಕ್ರಿಕೆಟ್: ಆಕ್ಷೇಪಾರ್ಹ ಘೋಷಣೆ ವಿಡಿಯೊ ವೈರಲ್ ಮಾಡಿದ 6 ಮಂದಿಯ ಬಂಧನ

ಪಿಟಿಐ
Published 26 ಅಕ್ಟೋಬರ್ 2021, 8:13 IST
Last Updated 26 ಅಕ್ಟೋಬರ್ 2021, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಭಾರತ–ಪಾಕಿಸ್ತಾನ ತಂಡಗಳ ನಡುವೆ ನಡೆದ ಟಿ20 ವಿಶ್ವಕಪ್ ಕ್ರಿಕೆಟ್‌ ಪಂದ್ಯದ ನಂತರ ಆಕ್ಷೇಪಣಾರ್ಹ ಘೋಷಣೆಯುಳ್ಳ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರು ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಸಾಂಬಾ ಜಿಲ್ಲೆಗೆ ಸೇರಿದ ಈ ವ್ಯಕ್ತಿಗಳು ಕ್ರಿಕೆಟ್‌ ಪಂದ್ಯದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣಾರ್ಹ ಘೋಷಣೆಗಳನ್ನು ಕೂಗಿದ ವಿಡಿಯೊವನ್ನು ವೈರಲ್ ಮಾಡಿದ್ದರು.

ವಿಡಿಯೊದಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಮಂದಿ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಜಯಗಳಿಸಿದ್ದಕ್ಕೆ ಭಾನುವಾರ ರಾತ್ರಿ ವಿಜಯೋತ್ಸವ ಆಚರಿಸುತ್ತಾ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳಿವೆ.

ADVERTISEMENT

ಈ ಘಟನೆಗೆ ಸಾಂಬಾ ಜಿಲ್ಲೆಯ ವಿವಿಧ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು ಮತ್ತು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಸಾಂಬಾ ಜಿಲ್ಲೆಯ ಜಿಲ್ಲಾಧಿಕಾರಿ ಅನುರಾಧ ಗುಪ್ತಾ ತಿಳಿಸಿದರು. ಬಂಧಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗಳಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.