ADVERTISEMENT

ತಮ್ಮ ಸರ್ಕಾರದ 11 ವರ್ಷಗಳ ಸಾಧನೆಯನ್ನು ತೆರೆದಿಟ್ಟ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:44 IST
Last Updated 9 ಜೂನ್ 2025, 15:44 IST
ಮೋದಿ ಸರ್ಕಾರ 11 ವರ್ಷ ಪೂರೈಸಿದ ಪ್ರಯುಕ್ತ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ಮುಖಂಡರು ಸೋಮವಾರ ವೀಕ್ಷಿಸಿದರು –ಪಿಟಿಐ ಚಿತ್ರ
ಮೋದಿ ಸರ್ಕಾರ 11 ವರ್ಷ ಪೂರೈಸಿದ ಪ್ರಯುಕ್ತ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ಮುಖಂಡರು ಸೋಮವಾರ ವೀಕ್ಷಿಸಿದರು –ಪಿಟಿಐ ಚಿತ್ರ   

ನವದೆಹಲಿ: ‘ಎನ್‌ಡಿಎ ಸರ್ಕಾರದ ಹನ್ನೊಂದು ವರ್ಷಗಳ ಆಡಳಿತದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಬದಲಾಗಿರುವ ಜತೆಯಲ್ಲೇ ಹವಾಮಾನ ಮತ್ತು ಡಿಜಿಟಲ್ ನಾವೀನ್ಯತೆಯಂತಹ ವಿಷಯಗಳಲ್ಲಿ ಪ್ರಮುಖ ಜಾಗತಿಕ ಧ್ವನಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದ್ದಾರೆ.

ತಮ್ಮ ಮೂರನೇ ಅವಧಿಯ ಆಡಳಿತದ ಮೊದಲ ವರ್ಷವನ್ನು ಸೋಮವಾರ ಪೂರ್ಣಗೊಳಿಸಿರುವುದಾಗಿ ಹೇಳಿದ ಮೋದಿ, ಕಳೆದ 11 ವರ್ಷಗಳಲ್ಲಿ ಸರ್ಕಾರವು ಉತ್ತಮ ಆಡಳಿತ ಮತ್ತು ಪರಿವರ್ತನೆಯ ಮೇಲೆ ಗಮನ ಹರಿಸಿತ್ತು ಎಂದರು.

140 ಕೋಟಿ ಭಾರತೀಯರ ಆಶೀರ್ವಾದ ಮತ್ತು ಸಾಮೂಹಿಕ ಪಾಲ್ಗೊಳ್ಳುವಿಕೆಯಿಂದ ದೊರೆತ ಶಕ್ತಿಯಿಂದ ಭಾರತವು ವಿವಿಧ ಕ್ಷೇತ್ರಗಳಲ್ಲಿ ಕ್ಷಿಪ್ರ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್’ ತತ್ವದಿಂದ ಮುಂದಡಿಯಿಟ್ಟಿರುವ ಎನ್‌ಡಿಎ ಸರ್ಕಾರವು ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿದೆ. ಆರ್ಥಿಕ ಬೆಳವಣಿಗೆಯಿಂದ ಸಾಮಾಜಿಕ ಉನ್ನತಿಯವರೆಗೆ, ಜನ-ಕೇಂದ್ರಿತ, ಎಲ್ಲರನ್ನೂ ಒಳಗೊಂಡ ಮತ್ತು ಸರ್ವತೋಮುಖ ಪ್ರಗತಿಯತ್ತ ಗಮನ ಹರಿಸಲಾಗಿದೆ ಎಂದರು.

‘ನಮ್ಮ ಸಾಮೂಹಿಕ ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ನಾವು ಭರವಸೆ, ವಿಶ್ವಾಸ ಮತ್ತು ಹೊಸ ಸಂಕಲ್ಪದೊಂದಿಗೆ ಎದುರು ನೋಡುತ್ತೇವೆ’ ಎಂದು ನುಡಿದರು. 

‘11 ವರ್ಷಗಳ ಸೇವೆ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮೋದಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಅಭಿವೃದ್ಧಿ ಕೆಲಸಗಳ ಸಂಪೂರ್ಣ ಮಾಹಿತಿ ಒಳಗೊಂಡಿರುವ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

81 ಕೋಟಿಗೂ ಅಧಿಕ ನಾಗರಿಕರು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದು, 15 ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಪಡೆದಿವೆ. ಬಡವರಿಗಾಗಿ ನಾಲ್ಕು ಕೋಟಿ ಮನೆಗಳು ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ಸರ್ಕಾರದ ಸಾಧನೆಯ ಮೇಲೆ ಬೆಳಕು ಚೆಲ್ಲಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಹನ್ನೊಂದು ವರ್ಷಗಳು ಸಂಕಲ್ಪ ಪ್ರಯತ್ನ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣೆಯ ‘ಸುವರ್ಣ ಯುಗ’

–ಅಮಿತ್‌ ಶಾ ಕೇಂದ್ರ ಗೃಹ ಸಚಿವ

ಹೊಣೆಗಾರಿಕೆ ಇಲ್ಲದ ಮೋದಿ ಸರ್ಕಾರ ವರ್ತಮಾನದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದು 2047ರ ಕನಸುಗಳನ್ನು ಮಾರಾಟ ಮಾಡುತ್ತಿದೆ

–ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ

ಪ್ರಧಾನಿ ಮೋದಿ ಅವರು ದೇಶದ ರಾಜಕೀಯ ಸಂಸ್ಕೃತಿಯನ್ನು ಬದಲಿಸಿದ್ದಾರೆ. ಸರ್ಕಾರದ ಕೆಲಸಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು

–ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ 

ಕಾಂಗ್ರೆಸ್‌ನಿಂದ ರಿಪೋರ್ಟ್‌ ಕಾರ್ಡ್‌

ಮೋದಿ ಸರ್ಕಾರದ 11 ವರ್ಷಗಳ ಆಡಳಿತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋಮವಾರ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಕುಂಠಿತ ಬೆಳವಣಿಗೆ ದರ ಹೆಚ್ಚುತ್ತಿರುವ ಹಸಿವು ಮತ್ತು ಸರ್ಕಾರದ ‘ಈಡೇರಿಸಲಾಗದ ಭರವಸೆ’ಗಳನ್ನು ಅದರಲ್ಲಿ ಎತ್ತಿ ತೋರಿಸಲಾಗಿದೆ. ‘11 ಸಾಲ್ ಝೂಠೆ ವಿಕಾಸ್‌ ಕೆ ವಾದೆ’ ಮತ್ತು ‘ಏಕ್‌ ಔರ್‌ ಬಾರ್‌ ಜುಮ್ಲಾ ಸರ್ಕಾರ್’ ಹೆಸರಿನ ಎರಡು ಕಿರುಪುಸ್ತಕಗಳನ್ನು ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ರಾಜೀವ್‌ ಗೌಡ ಸೋಮವಾರ ಬಿಡುಗಡೆ ಮಾಡಿದರು.  ‘ಈ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುವುದು ಮತ್ತು ಸುಳ್ಳು ಸುದ್ದಿ ಹರಡುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಪಕ್ಷದಲ್ಲಿದ್ದುಕೊಂಡು ಈ ಕಟು ವಾಸ್ತವವನ್ನು ಜನರಿಗೆ ತಿಳಿಸುವುದು ನಮ್ಮ ಕೆಲಸ’ ಎಂದು ಅವರು ಹೇಳಿದರು. ‘11 ಸಾಲ್ ಝೂಠೆ ವಿಕಾಸ್‌ ಕೆ ವಾದೆ’ ಕಿರುಪುಸ್ತಕವು ‘ಈ ಸರ್ಕಾರದ ಕೆಲವು ದೊಡ್ಡ ಸುಳ್ಳುಗಳನ್ನು’ ಬಯಲು ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.