ADVERTISEMENT

ಕಟ್ಟೆಚ್ಚರ: ಶ್ರೀನಗರ ಬಹುತೇಕ ಸ್ತಬ್ಧ

ಈದ್‌ ಪ್ರಾರ್ಥನೆಯ ಬಳಿಕ ಕೆಲವೆಡೆ ಪ್ರತಿಭಟನೆ: ಭಾರತ ವಿರೋಧಿ ಘೋಷಣೆ

ರಾಯಿಟರ್ಸ್
Published 12 ಆಗಸ್ಟ್ 2019, 20:15 IST
Last Updated 12 ಆಗಸ್ಟ್ 2019, 20:15 IST
ವಿಶೇಷಾಧಿಕಾರ ರದ್ದು ಖಂಡಿಸಿ ಶ್ರೀನಗರದಲ್ಲಿ ಜನರು ಪ್ರತಿಭಟನೆ ನಡೆಸಿದರು
ವಿಶೇಷಾಧಿಕಾರ ರದ್ದು ಖಂಡಿಸಿ ಶ್ರೀನಗರದಲ್ಲಿ ಜನರು ಪ್ರತಿಭಟನೆ ನಡೆಸಿದರು   

ಶ್ರೀನಗರ: ಜಮ್ಮು ಕಾಶ್ಮೀರದ ಅತಿ ದೊಡ್ಡ ನಗರವಾದ ಶ್ರೀನಗರವು ಸೋಮವಾರ ಬಹುತೇಕ ಸ್ತಬ್ಧವಾಗಿತ್ತು. 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷಾಧಿಕಾರ ರದ್ದು ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಯಬಹುದೆಂಬ ಕಾರಣಕ್ಕೆ ಇಡೀ ನಗರದಲ್ಲಿ ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

‘ಕಿಡಿಗೇಡಿಗಳು, ಭಯೋತ್ಪಾದಕರು ಗಲಭೆ ಸೃಷ್ಟಿಸಬಹುದೆಂಬ ಕಾರಣಕ್ಕೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿಯೂ ಈದ್‌ ಅಂಗವಾಗಿ ಸಾವಿರಾರು ಜನರು ಹೊರಬಂದು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ’ ಎಂದು ಗೃಹಸಚಿವಾಲಯ ಹೇಳಿದೆ. ಜೊತೆಗೆ ಯಾವ ಮಸೀದಿಯಲ್ಲಿ ಎಷ್ಟು ಮಂದಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಸಹ ಮಾಧ್ಯಮಗಳಿಗೆ ನೀಡಿದೆ.

ಸಂವಹನ ಮಾಧ್ಯಮಗಳ ಮೇಲಿನ ನಿಷೇಧವು ಎಂಟನೆಯ ದಿನವೂ ಮುಂದುವರಿದಿರುವುದರಿಂದ ಇಂಟರ್‌ನೆಟ್‌, ಫೋನ್‌ ಮುಂತಾದ ಯಾವ ಸೇವೆಯೂ ಜನರಿಗೆ ಲಭ್ಯವಾಗುತ್ತಿಲ್ಲ. ಅಂಗಡಿ ಮುಂಗಟ್ಟುಗಳೆಲ್ಲ ಮುಚ್ಚಿವೆ. ಕೆಲವು ಅಂಗಡಿಗಳ ಶಟರ್‌ಗಳ ಮೇಲೆ ಭಾರತ ವಿರೋಧಿ ಘೋಷಣಾ ಪತ್ರಗಳನ್ನು ಅಂಟಿಸಲಾಗಿದೆ.

ADVERTISEMENT

‘ಪೊಲೀಸ್‌ ಮುಖ್ಯಸ್ಥರು ಹಾಗೂ ಜಿಲ್ಲಾಡಳಿತದ ಪ್ರತಿನಿಧಿಗಳ ಜೊತೆ ರಾಜ್ಯದ ಮುಖ್ಯಕಾರ್ಯದರ್ಶಿಯವರು ಭಾನುವಾರ ಸಂಜೆ ಸಭೆ ನಡೆಸಿದ್ದರು. ಶ್ರೀನಗರದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ತೀರ್ಮಾನವನ್ನು ಆ ಸಭೆಯಲ್ಲಿ ಕೈಗೊಳ್ಳಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆ: ಸೋಮವಾರ ಈದ್‌ ಪ್ರಾರ್ಥನೆಯ ಬಳಿಕ ಕೆಲವರು ‘ನಮಗೆ ಸ್ವಾತಂತ್ರ್ಯ ಬೇಕು’ ಎಂದು ಕಣ್ಣೀರು ಹಾಕಿರುವುದು ಕಂಡುಬಂತು. ಪ್ರಾರ್ಥನೆಗೆ ಬಂದಿದ್ದ ನೂರಾರು ಮಂದಿ ಪ್ರತಿಭಟನೆಗೆ ಇಳಿದಿದ್ದರು.

‘ಅಲ್ಲಲ್ಲಿ ಕೆಲವರು ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಇಂಥ ಪ್ರತಿಭಟನೆಗಳು ಹಿಂದಿನಿಂದಲೂ ನಡೆಯುತ್ತಿವೆ’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.