ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ 'ಆ್ಯಕ್ಸಿಯಂ–4' ಮಿಷನ್ ಅನ್ನು 19ಕ್ಕೂ ಮುನ್ನ ನಡೆಸುವ ಯೋಜನೆ ಇಲ್ಲ ಎಂದು ಇಸ್ರೊ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದೆ.
ನಾಸಾ, ಆ್ಯಕ್ಸಿಯಂ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಸಹಯೋಗದಲ್ಲಿ ಈ ಯೋಜನೆ ನಡೆಯುತ್ತಿದೆ. ಆಕ್ಸಿಯಂ ಸ್ಪೇಸ್ ಮತ್ತು ಭಾರತೀಯ ವಿಜ್ಞಾನಿಗಳ ಸಮನ್ವಯತೆಯಲ್ಲಿ ಕಾಲಮಿತಿಯೊಳಗೆ ಪರೀಕ್ಷಾ ಮಾದರಿಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಇಸ್ರೊ ತಿಳಿಸಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಮುಂಬರುವ ಆ್ಯಕ್ಸಿಯಂ -4 ಮಿಷನ್ ಅನ್ನು ಜೂನ್ 19ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೂನ್ 14ರಂದು ಹೇಳಿದ್ದರು. ಅಲ್ಲದೆ, ಯೋಜನೆ ಮುಂದೂಡಲು ಕಾರಣವಾದ ಎಲ್ಲ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಲಾಗಿದೆ ಎಂದು ಸ್ಪೇಸ್‌ಎಕ್ಸ್ ತಂಡ ದೃಢಪಡಿಸಿದೆ ಎಂದೂ ಅವರು ಸ್ಪಷ್ಟಪಡಿಸಿದ್ದರು.
‘ಆ್ಯಕ್ಸಿಯಂ–4’ ಮಿಷನ್ ಉಡಾವಣೆಗೆ ಜೂನ್ 19ರಂದು ದಿನಾಂಕ ನಿಗದಿಪಡಿಸಲಾಗಿದೆ ಎಂದು ಇಸ್ರೊ ಶನಿವಾರ ಘೋಷಿಸಿತ್ತು.
ಜೂನ್ 11ರಂದು ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್–9 ರಾಕೆಟ್ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ ರಾಕೆಟ್‌ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಯಿತು. ಮೇ 29, ಜೂನ್ 8 ಮತ್ತು ಜೂನ್ 10ರಂದು ಸಹ ರಾಕೆಟ್ ಉಡಾವಣೆಗೆ ದಿನಾಂಕ ನಿಗದಿ ಮಾಡಿ ಆನಂತರ ಮುಂದೂಡಲಾಗಿತ್ತು.
‘ರಾಕೆಟ್‌ನಲ್ಲಿನ ಆಮ್ಲಜನಕ ಸೋರಿಕೆ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ ಎಂಬುದು ಇಸ್ರೊ, ಆ್ಯಕ್ಸಿಯಂ,ಸ್ಪೇಸ್ ಎಕ್ಸ್‌ನೊಂದಿಗೆ ನಡೆದ ಸಭೆಯಲ್ಲಿ ಖಚಿತವಾಗಿದೆ’ ಎಂದು ಇಸ್ರೊ ಹೇಳಿಕೆಯಲ್ಲಿ
ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.