ADVERTISEMENT

ಬಹುಕೋಟಿ ಚಿನ್ನಾಭರಣ ವಂಚನೆ: ಶಾಸಕನ ಬಂಧನ

ಪಿಟಿಐ
Published 7 ನವೆಂಬರ್ 2020, 15:54 IST
Last Updated 7 ನವೆಂಬರ್ 2020, 15:54 IST
ಎಂ.ಸಿ.ಕಮರುದ್ದೀನ್‌
ಎಂ.ಸಿ.ಕಮರುದ್ದೀನ್‌   

ಕಾಸರಗೋಡು: ಚಿನ್ನಾಭರಣ ಉದ್ಯಮದಲ್ಲಿ ಬಹುಕೋಟಿ ವಂಚನೆಗೆ ಸಂಬಂಧಿಸಿದಂತೆ ಐಯುಎಂಎಲ್‌(ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌)ಪಕ್ಷದ ಮಂಜೇಶ್ವರ ವಿಧಾನಸಭಾಕ್ಷೇತ್ರದ ಶಾಸಕ ಎಂ.ಸಿ.ಕಮರುದ್ದೀನ್‌ ಅವರನ್ನು ಶನಿವಾರ ವಿಶೇಷ ತನಿಖಾ ತಂಡವು(ಎಸ್‌ಐಟಿ) ಬಂಧಿಸಿದೆ.

ವಿಶೇಷ ತನಿಖಾ ತಂಡವು ಶನಿವಾರ ಬೆಳಗ್ಗೆ ಅವರನ್ನು ವಿಚಾರಣೆಗಾಗಿ ಕರೆದಿತ್ತು. ಸಂಜೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಮೂರು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿದೆ. ತನಿಖಾ ತಂಡವು ಅವರ ವಿರುದ್ಧ ಇರುವ 77 ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. ಕಾಸರಗೋಡು, ಕಣ್ಣೂರಿನಲ್ಲಿ ಕಮರುದ್ದೀನ್‌ ವಿರುದ್ಧ ಬಂಡವಾಳ ಹೂಡಿಕೆದಾರು ನೀಡಿದ ದೂರಿನ ಅನ್ವಯ 115 ಪ್ರಕರಣಗಳು ದಾಖಲಾಗಿದೆ. ಬಂಡವಾಳ ಹೂಡಿಕೆದಾರರಲ್ಲಿ ಹಲವರು ಐಯುಎಂಎಲ್‌ನ ಕಾರ್ಯಕರ್ತರೇ ಆಗಿದ್ದಾರೆ.

ADVERTISEMENT

ಫ್ಯಾಷನ್‌ ಗೋಲ್ಡ್‌ ಜ್ಯುಯೆಲ್ಲರಿ ಅಧ್ಯಕ್ಷನಾಗಿರುವ ಕಮರುದ್ದೀನ್‌, ‘ಇದು ರಾಜಕೀಯ ಪ್ರೇರಿತ ಬಂಧನ’ ಎಂದು ಆರೋಪಿಸಿದ್ದಾರೆ. ‘ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ಸೋಮವಾರ ಈ ಕುರಿತ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದೆ. ಬಂಧನದ ಮುಂಚಿತವಾಗಿ ನನಗೆ ಯಾವುದೇ ನೋಟಿಸ್‌ ನೀಡಿರಲಿಲ್ಲ. ಸರ್ಕಾರವು ನನ್ನನ್ನು ಬಂಧಿಸಿ, ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನೋಡುತ್ತಿದೆ’ ಎಂದು ಟೀಕಿಸಿದ್ದಾರೆ. ಐಯುಎಂಎಲ್‌ ಜಿಲ್ಲಾ ಮುಖಂಡ, ಫ್ಯಾಷನ್‌ ಜ್ಯುಯೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೊಯ ಅವರನ್ನು ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.