ADVERTISEMENT

'ಸೈಬರ್‌ ಉಗ್ರರ’ ಮೇಲೆ ಜಮ್ಮು–ಕಾಶ್ಮೀರ ಪೊಲೀಸ್‌ ನಿಗಾ

ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಪ್ರಚೋದನೆ: ಭಯೋತ್ಪಾದನೆ ಸಂಘಟನೆಗಳಿಗೆ ನೆರವು

ಪಿಟಿಐ
Published 29 ಆಗಸ್ಟ್ 2021, 16:22 IST
Last Updated 29 ಆಗಸ್ಟ್ 2021, 16:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶ್ರೀನಗರ: ಯುವಕರನ್ನು ದಾರಿ ತಪ್ಪಿಸಿ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ನೀಡುತ್ತಿರುವ ‘ಸೈಬರ್‌’ ಭಯೋತ್ಪಾದಕರನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮುಂದಾಗಿದ್ದಾರೆ.

‘ಇವರು ಅತ್ಯಂತ ಕೆಟ್ಟ ಭಯೋತ್ಪಾದಕರು. ಅನಾಮಧೇಯವಾಗಿ ಉಳಿಯುವ ಈ ಸೈಬರ್‌ ಭಯೋತ್ಪಾದಕರು ಅಪಾರ ಹಾನಿ ಮಾಡುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋಮು ಸಂಘರ್ಷ ಸೃಷ್ಟಿಸುವುದು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿಗಳನ್ನು ತಿರುಚುವ ಕೃತ್ಯಗಳನ್ನು ಇವರು ಮಾಡುತ್ತಿದ್ದಾರೆ. ಆದರೆ, ಈ ಭಯೋತ್ಪಾದಕರು ದೂರದ ದೇಶಗಳಲ್ಲಿ ಸುರಕ್ಷಿತವಾಗಿದ್ದಾರೆ’ ಎಂದು ವಿವರಿಸಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮಹಾನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಹಾಗೂ ಹಿರಿಯ ಸೇನಾ ಅಧಿಕಾರಿಗಳು ಮತ್ತು ವಿವಿಧ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಿದ್ದಾರೆ.

‘ಯುದ್ಧಗಳು ಈಗ ಹೊಸ ಸ್ವರೂಪ ಪಡೆದುಕೊಂಡಿವೆ. ಶಸ್ತ್ರಾಸ್ತ್ರಗಳ ಮೂಲಕ ನಡೆಯುವ ಯುದ್ಧದ ಬದಲು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳ ಮೂಲಕವೂ ನಡೆಸಬಹುದಾಗಿದೆ. ಕಾಶ್ಮೀರ ಅಥವಾ ಯಾವುದೋ ದೇಶದಲ್ಲಿ ಕುಳಿತು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯುವಕರಿಗೆ ಪ್ರಚೋದನೆ ನೀಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ ಹಾಗೂ ಪ್ರತ್ಯೇಕತಾವಾದಿಗಳಿಗೆ ಮತ್ತು ಉಗ್ರರಿಗೆ ಅನುಕೂಲವಾಗುವ ಪರಿಸ್ಥಿತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಅಶಾಂತಿ, ಹಿಂಸಾಚಾರ ಸೃಷ್ಟಿಸುವ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸೈಬರ್‌ ಭಯೋತ್ಪಾದಕರು ನಿಜವಾದ ಭಯೋತ್ಪಾದಕರಿಗಿಂತ ಅಪಾಯಕಾರಿ. ಸೈಬರ್‌ ಭಯೋತ್ಪಾದಕರನ್ನು ಪತ್ತೆ ಮಾಡುವುದು ಸಹ ಕಷ್ಟ. ಅನಾಮಧೇಯವಾಗಿ ಉಳಿಯುತ್ತಿರುವುದರಿಂದ ಹೊಸ ಸವಾಲುಗಳನ್ನು ಸೃಷ್ಟಿಸಿದೆ. ಹೀಗಾಗಿ, ಇವರ ಮೇಲೆ ಹೆಚ್ಚು ನಿಗಾವಹಿಸುವ ಪ್ರಯತ್ನ ಮಾಡಿದ್ದು, ಸ್ವಲ್ಪಮಟ್ಟಿನ ಯಶಸ್ಸು ಸಹ ದೊರೆತಿದೆ’ ಎಂದು ಡಿಜಿಪಿ ದಿಲ್‌ಬಾಗ್‌ ಸಿಂಗ್‌ ತಿಳಿಸಿದ್ದಾರೆ.

‘ಭಯೋತ್ಪಾದನೆ ಸಂಘಟನೆಗಳಿಗೆ ಯುವಕರನ್ನು ನೇಮಿಸಿಕೊಳ್ಳುವ ಕಾರ್ಯದಲ್ಲಿಯೂ ಕೆಲವರು ತೊಡಗಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.