ADVERTISEMENT

ಜಮ್ಮು- ಕಾಶ್ಮೀರ: ಉಗ್ರರ ಸಂಖ್ಯೆ ಹೆಚ್ಚಳ

ಕಣಿವೆಯಲ್ಲಿ 200 ಉಗ್ರರು ಈಗಲೂ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 18:26 IST
Last Updated 14 ನವೆಂಬರ್ 2021, 18:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಭದ್ರತಾ ಪಡೆಗಳಿಗೆ 133 ಉಗ್ರರು ಬಲಿಯಾದರೂ ಉಗ್ರ ಚಟುವಟಿಕೆಯಲ್ಲಿ ಕಾರ್ಯ ಪ್ರವೃತ್ತರಾದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸುಮಾರು 200 ಉಗ್ರರು ಸಕ್ರಿಯರಾಗಿರುವ ಆತಂಕಕಾರಿ ಬೆಳವಣಿಗೆ ತಿಳಿದು ಬಂದಿದೆ.

ಗಡಿಯಲ್ಲಿ ನುಸುಳುವಿಕೆ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಸ್ಥಳೀಯವಾಗಿ ಆಗಿಂದಾಗ್ಗೆ ಉಗ್ರರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದು ಉಗ್ರರು ಯಥಾಸ್ಥಿತಿ ಕಾಪಾಡಿಕೊಳ್ಳಲು ಕಾರಣವಾಗಿದೆ. ಈ ವರ್ಷ ಕಾಶ್ಮೀರದಲ್ಲಿ 100 ಸ್ಥಳೀಯ ಯುವಕರು ಹೊಸದಾಗಿ ಉಗ್ರ ಸಂಘಟನೆಗಳನ್ನು ಸೇರಿದ್ದರೆ, 15-20 ಉಗ್ರರು ಕಾಶ್ಮೀರ ಕಣಿವೆಗೆ ಪಾಕಿಸ್ತಾನದಿಂದ ನುಸುಳಿ ಬಂದಿದ್ದಾರೆ. ಕಳೆದ ವರ್ಷ 207 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು. 174 ಮಂದಿ ಉಗ್ರ ಸಂಘಟನೆಗಳನ್ನು ಸೇರಿದ್ದರು.

‘ಈ ರೀತಿಯ ಉಗ್ರರ ನೇಮಕಾತಿಯನ್ನು ನೋಡಿದಾಗ ಭದ್ರತಾ ಪಡೆಯ ಕಾರ್ಯಾಚರಣೆಗಳು ಯಾವುದೇ ಫಲ ನೀಡುತ್ತಿಲ್ಲ. ಒಬ್ಬ ಉಗ್ರ ಸತ್ತ ಜಾಗಕ್ಕೆ ಮತ್ತೊಬ್ಬನನ್ನು ತಕ್ಷಣವೇ ನೇಮಕ ಮಾಡಿಕೊಳ್ಳಲಾಗುತ್ತಿದೆ. 2020ರಲ್ಲಿ ಪಾಕಿಸ್ತಾನದ ಗಡಿ ದಾಟಿ ಬಂದವರ ಸಂಖ್ಯೆ ಕಡಿಮೆ ಇದ್ದು, ಈ ವರ್ಷವೇ ಹೆಚ್ಚಾಗಿದೆ. ಸುಮಾರು 35-40 ಪಾಕಿಸ್ತಾನಿ ಉಗ್ರರು ಸದ್ಯ ಕಾರ್ಯ ಪ್ರವೃತ್ತರಾಗಿದ್ದಾರೆ. ಅವರಲ್ಲಿ 12 ಜನ ಜೈಶ್– ಎ– ಮೊಹಮ್ಮದ್ ಸಂಘಟನೆಗೆ ಸೇರಿದರೆ, ಉಳಿದವರು ಲಷ್ಕರ್– ಎ–ತೈಯಬಾ ಸಂಘಟನೆಗೆ ಸೇರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಾಕ್‌ನ ಈ ಉಗ್ರರು ತಳಮಟ್ಟದ ನೆಟ್‌ವರ್ಕ್‌ ರಚಿಸಿಕೊಂಡು (ಒಜಿಡಬ್ಲು) ಭದ್ರತಾ ಪಡೆಗಳಿಗೆ ಸಿಗದಂತೆ ದಾಳಿ ನಡೆಸುತ್ತಿದ್ದಾರೆ. ಪಾಕಿಸ್ತಾನದ ಉಗ್ರರು ಹೊಸದಾಗಿ ನೇಮಕಗೊಂಡ ಸ್ಥಳೀಯ ಯುವ ಉಗ್ರರನ್ನು ಬಳಸಿಕೊಂಡು ಭದ್ರತಾ ಪಡೆಗಳ ಮೇಲೆ ದಾಳಿ ಹಾಗೂ ಅಲ್ಲಲ್ಲಿ ಗ್ರೆನೇಡ್‌ ದಾಳಿ ನಡೆಸುತ್ತಿದ್ದಾರೆ. ಹೊಸದಾಗಿ ನೇಮಕಗೊಂಡವರ ಬಗ್ಗೆ ಯಾವುದೇ ಪೂರ್ವಪರ ಮಾಹಿತಿಯು ಸ್ಥಳೀಯ ಪೊಲೀಸರು ಹಾಗೂ ಭದ್ರತಾಪಡೆಗಳಿಗೂ ಇಲ್ಲ. ಅಲ್ಲದೇ ಈ ಉಗ್ರರ ಮೇಲೆ ಯಾವ ಕಣ್ಗಾವಲೂ ಇಲ್ಲ. ಜನರೊಂದಿಗೆ ಇದ್ದುಕೊಂಡು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಎಷ್ಟೇ ಉಗ್ರರನ್ನು ಕೊಂದರೂ ಅಷ್ಟೇ ಪ್ರಮಾಣದ ಉಗ್ರರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಹಾಗಾಗಿ ಭಯೋತ್ಪಾದನೆ ಜಮ್ಮು ಮತ್ತು ಕಾಶ್ಮೀರದಲ್ಲೂ ಇನ್ನೂ ಚಾಲ್ತಿಯಲ್ಲಿದೆ. ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿದ ಸ್ವಲ್ಪ ದಿನಗಳ ನಂತರ ಕಾನೂನು ಸುವ್ಯವಸ್ಥೆ ತಕ್ಕಮಟ್ಟಿಗೆ ಸರಿದಾರಿಗೆ ಬಂದಿದೆ ಎನ್ನುತ್ತಿರುವಾಗಲೇ ಇತ್ತೀಚೆಗೆ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಅತಿಕ್ರಮಣಾ ತಡೆ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದುಷ್ಕೃತ್ಯದಲ್ಲಿ ತೊಡಗಿರುವ ಹತ್ತಾರು ಯುವಕರ ಹೆಸರು ಉಗ್ರರ ಪಟ್ಟಿಯಲ್ಲಿ ಇಲ್ಲ. ಆದರೆ ಉಗ್ರ ಚಟುವಟಿಕೆ ಮಾಡುವಷ್ಟು ತರಬೇತಿ ಹಾಗೂ ಪರಿಣತಿ ಹೊಂದಿರುವ ಈ ಅರೆಕಾಲಿಕ ಉಗ್ರರೇ ಕಳೆದ ಅಕ್ಟೋಬರ್‌ನಿಂದ ಈವರೆಗೆ 15 ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಈ ವರ್ಗದ ಉಗ್ರರು ಶಸ್ತ್ರಾಸ್ತ್ರ ತರಬೇತಿಗಾಗಿ ಗಡಿದಾಟಿಯೂ ಹೋಗುವುದಿಲ್ಲ, ಭೂಗತರಾಗಿಯೂ ಇರುವುದಿಲ್ಲ. ಶಕ್ತಿ ಪ್ರದರ್ಶನಕ್ಕಾಗಿ ಹಾಗೂ ಹಣದ ಆಸೆಗಾಗಿ ಈ ಕೆಲಸ ಮಾಡುತ್ತಿರಬಹುದು. ಈ ಸ್ಥಳೀಯ ಉಗ್ರರನ್ನು ಲಷ್ಕರ್ ಎ ತೈಯಬಾ, ಜೈಶೆ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.