ADVERTISEMENT

ಜಮ್ಮುವಿನಲ್ಲಿ 38.9 ಡಿಗ್ರಿ ಗರಿಷ್ಠ ತಾಪಮಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 17:02 IST
Last Updated 12 ಏಪ್ರಿಲ್ 2022, 17:02 IST

ಜಮ್ಮು: ಕಣಿವೆಯ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ರಾತ್ರಿ ವೇಳೆಯ ತಾಪಮಾನ ಹೆಚ್ಚಾಗಿದ್ದು, ಹಗಲಿನ ತಾಪಮಾನ ಕೊಂಚ ಇಳಿಕೆಯಾಗಿದೆ. ಮಂಗಳವಾರ ಹಗಲಿನಲ್ಲಿ 38.9 ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

‘ಹಿಂದಿನ ರಾತ್ರಿ 22.9 ಸೆಲ್ಸಿಯಸ್‌ ಇದ್ದ ಕನಿಷ್ಠ ತಾಪಮಾನವು, 26.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದ್ದು, ಇದು ಈ ಋತುವಿನ ಸಾಮಾನ್ಯ ತಾಪಮಾನಕ್ಕಿಂತ 7.4ಡಿಗ್ರಿ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ಏಕಾಏಕಿ ತಾಪಮಾನ ಏರಿಕೆಯಾಗಿದ್ದು, ಮಾರ್ಚ್‌ ತಿಂಗಳಲ್ಲಿ ಶೇ 80ರಷ್ಟು ಮಳೆ ಕೊರೆತೆಯಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದರು.

ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಗರಿಷ್ಠ 25.7 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 11.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಮಾತಾ ವೈಷ್ಣೋದೇವಿ ದೇಗುಲದ ಯಾತ್ರಾರ್ಥಿಗಳ ಮೂಲಶಿಬಿರವಾದ ಕತ್ರಾದಲ್ಲಿ ಗರಿಷ್ಠ ತಾಪಮಾನ 35.2, ಕನಿಷ್ಠ 22.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ADVERTISEMENT

‘ವಾಯುಭಾರ ಕುಸಿತದಿಂದ ಕಣಿವೆಯ ಎತ್ತರದ ಪ್ರದೇಶಗಳಲ್ಲಿ 14ರವರೆಗೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಮಳೆ ಅಥವಾ ಹಿಮ ಸುರಿಯುವ ಸಾಧ್ಯತೆಯಿದ್ದು, ಇದರಿಂದಾಗಿ 4ರಿಂದ 5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇಳಿಕೆಯಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.