ADVERTISEMENT

ಶಬರಿಗಿರಿಯಲ್ಲಿ ನಡುರಾತ್ರಿ ಪ್ರಹಸನ: ಕೇರಳ ಮತ್ತೆ ಉದ್ವಿಗ್ನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 20:09 IST
Last Updated 17 ನವೆಂಬರ್ 2018, 20:09 IST
ಮಲಯಾಳ ವೃಶ್ಚಿಕ ಮಾಸದ ಮೊದಲ ದಿನವಾದ ಶನಿವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ನಿಂತಿದ್ದರು. ಚಿತ್ರ: ಪಿಟಿಐ
ಮಲಯಾಳ ವೃಶ್ಚಿಕ ಮಾಸದ ಮೊದಲ ದಿನವಾದ ಶನಿವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ನಿಂತಿದ್ದರು. ಚಿತ್ರ: ಪಿಟಿಐ   

ಪಂಪಾ/ಕೇರಳ: ಪೊಲೀಸ್‌ ಸರ್ಪಗಾವಲು ಮತ್ತು ನಿಷೇಧಾಜ್ಞೆ ನಡುವೆಯೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ ಹಿಂದೂ ಐಕ್ಯ ವೇದಿಯ ರಾಜ್ಯ ಅಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಕೇರಳದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರ ಕ್ರಮವನ್ನು ವಿರೋಧಿಸಿ ಶಬರಿಮಲೆ ಕರ್ಮ ಸಮಿತಿ ಮತ್ತು ಹಿಂದುತ್ವ ಪರ ಸಂಘಟನೆಗಳು ಶನಿವಾರ ಹರತಾಳಕ್ಕೆ ಕರೆ ನೀಡಿದ್ದವು. ಬಸ್‌ಗಳು ರಸ್ತೆಗೆ ಇಳಿಯದೆ ಯಾತ್ರಿಗಳು ಪರದಾಡಬೇಕಾಯಿತು. ಶಬರಿಮಲೆ, ಪಂಪಾ, ಮಲ್ಲಪುರಂನಲ್ಲಿ ವಾಣಿಜ್ಯ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ಠಾಣೆಯಲ್ಲಿಯೇ ನಿರಶನ: 50 ವರ್ಷದ ಶಶಿಕಲಾ ಅವರು ಇರುಮುಡಿ ಹೊತ್ತು ಬೆಂಬಲಿಗರೊಂದಿಗೆ ಶುಕ್ರವಾರ ರಾತ್ರಿಯೇ ಶಬರಿಮಲೆ ಸನ್ನಿಧಾನ ತಲುಪಿದ್ದರು. ಮರಳಿ ಹೋಗುವಂತೆ ಪೊಲೀಸರು ಮಾಡಿದ ಮನವಿಗೆ ಅವರು ಸೊಪ್ಪು ಹಾಕಲಿಲ್ಲ. ಅಯ್ಯಪ್ಪ ದರ್ಶನ ಪಡೆಯದೆ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಬಿಗಿ ಪಟ್ಟು ಹಿಡಿದರು.

ADVERTISEMENT

ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಶಶಿಕಲಾ ಅವರನ್ನು ಬೆಳಗಿನ ಜಾವ 2.30ಕ್ಕೆ ಬಂಧಿಸಿ ವಾಹನದಲ್ಲಿ ರನ್ನಿ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿಯೇ ಶಶಿಕಲಾ ಅವರು ಅನ್ನ, ನೀರು ಬಿಟ್ಟು ನಿರಶನ ಆರಂಭಿಸಿದರು.

ನಿಲಕ್ಕಲ್‌ ಮತ್ತು ಶಬರಿಮಲೆಯಲ್ಲಿ ಬಿಡಾರ ಹೂಡಿದ್ದ ಅಯ್ಯಪ್ಪ ಧರ್ಮಸೇನಾದ ರಾಹುಲ್‌ ಈಶ್ವರ್‌ ಹಾಗೂ ಬಿಜೆಪಿ ನಾಯಕರಿಗೆ ಜಾಗ ಖಾಲಿ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು.

ನಾಳೆ ‘ಸುಪ್ರೀಂ’ಗೆ ಟಿಡಿಬಿ ಅರ್ಜಿ

ಪಂಪಾ: ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲದೊಳಗೆ ಮುಕ್ತ ಪ್ರವೇಶ ಅವಕಾಶ ನೀಡುವ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಕಾಲಾವಕಾಶ ಕೋರಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ.

ತಿರುವಾಂಕೂರು ದೇವಸ್ವಂ ಮಂಡಳಿಯು ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.

ಪಂದಳ ರಾಜಕುಟುಂಬ ಸದಸ್ಯರ ಸಮಕ್ಷಮದಲ್ಲಿ ಶುಕ್ರವಾರ ರಾತ್ರಿ ಟಿಡಿಬಿ ಪದಾಧಿಕಾರಿಗಳು ಮತ್ತು ತಂತ್ರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕಂಡು ವಿವರಿಸುವುದಾಗಿ ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್‌ ತಿಳಿಸಿದ್ದಾರೆ.

ಮುಖ್ಯಾಂಶಗಳು

* 41 ದಿನಗಳ ಮಂಡಲ ಪೂಜೆಗಾಗಿ ಬಾಗಿಲು ತೆರೆದಿರುವ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶನಿವಾರ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು.

* ಬೆಳಗಿನ ಜಾವ 3 ಗಂಟೆಗೆ ದೇಗುಲದ ಬಾಗಿಲನ್ನು ತೆರೆಯಲಾಯಿತು. ಹೊಸ ಅರ್ಚಕರ ಉಸ್ತುವಾರಿಯಲ್ಲಿ ಪೂಜೆಯ ವಿಧಿ, ವಿಧಾನ ನಡೆದವು.

* ಡಿಸೆಂಬರ್‌ 27ರಂದು ದೇಗುಲದ ಬಾಗಿಲು ಮುಚ್ಚಲಾಗುವುದು. ಮಕರವಿಳಕ್ಕು ಹಬ್ಬಕ್ಕಾಗಿ ಡಿ.30ರಂದು ಮತ್ತೆ ಬಾಗಿಲು ತೆರೆಯಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.