ADVERTISEMENT

ಕೇರಳದ ‘ಹಿರಿಯ ವಿದ್ಯಾರ್ಥಿ‘, ಶತಾಯುಷಿ ಭಾಗೀರಥಿ ಅಮ್ಮ ಇನ್ನಿಲ್ಲ

ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ ಶತಾಯುಷಿ

ಪಿಟಿಐ
Published 23 ಜುಲೈ 2021, 10:56 IST
Last Updated 23 ಜುಲೈ 2021, 10:56 IST
ಭಾಗೀರಥಿ ಅಮ್ಮ
ಭಾಗೀರಥಿ ಅಮ್ಮ   

ಕೊಲ್ಲಂ (ಕೇರಳ): ‌105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ, ‘ನಾರಿಶಕ್ತಿ‘ ಪ್ರಶಸ್ತಿ ಪುರಸ್ಕೃತೆ, ಕೇರಳದ ‘ಹಿರಿಯ ವಿದ್ಯಾರ್ಥಿ‘ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ, 2019 ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ (ಕೆಎಸ್‌ಎಲ್‌ಎಂ) ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಕೊಲ್ಲಂನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ ಇವರು, 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದರು.

ಕೆಎಸ್‌ಎಲ್‌ಎಂ ಮೂಲಗಳ ಪ್ರಕಾರ ವಯಸ್ಸಿನ ಕಾರಣದಿಂದಾಗಿ ಭಾಗೀರಥಿಯವರಿಗೆ ನಿಗದಿತ ಅವಧಿಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಅವರು ಪರಿಸರ, ಗಣಿತ ಮತ್ತು ಮಲಯಾಳಂ ವಿಷಯಗಳ ಪತ್ರಿಕೆಗಳಿಗೆ ಉತ್ತರಿಸಲು ಮೂರು ದಿನ ಸಮಯ ತೆಗೆದುಕೊಂಡರಂತೆ.

ADVERTISEMENT

ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಭಾಗೀರಥಿಯವರು, ಕುಟುಂಬ ನಿರ್ವಹಣೆಗಾಗಿ, ಮೂರನೇ ವಯಸ್ಸಿಗೆ ಓದನ್ನು ಮೊಟಕುಗೊಳಿಸಿದ್ದರು. ಓದು, ಅಧ್ಯಯನಕ್ಕಾಗಿ ಹಂಬಲಿಸುತ್ತಿದ್ದ ಅವರಿಗೆ ಕೊನೆಗೂ ಶಿಕ್ಷಣ ಮುಂದುವರಿಸಲು ಅವಕಾಶವೇ ಸಿಗಲಿಲ್ಲ. ಅಮ್ಮನಿಗೆ ಅಧ್ಯಯನದ ಬಗೆಗಿರುವ ಉತ್ಸಾಹವನ್ನು ಕಂಡ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ‘ಮನ್‌ ಕಿ ಬಾತ್‌‘ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದರು.

‘ಭಾಗೀರಥಿಯವರಿಗೆ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯನ್ನು ಪಾಸು ಮಾಡಬೇಕೆಂಬ ಕನಸಿತ್ತು. ಆ ಕನಸು ಕೊನೆಗೂ ನನಸಾಗಲಿಲ್ಲ‘ ಎಂದು ಕುಟುಂಬದ ಸದಸ್ಯರು ನೆನಪಿಸಿಕೊಳ್ಳುತ್ತಾರೆ.

ಸಂಧ್ಯಾಕಾಲದಲ್ಲೂ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ತೋರಿದ್ದಕ್ಕಾಗಿ, ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಭಾಗೀರಥಿ ಅಮ್ಮನವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ನಾರಿಶಕ್ತಿ‘ ಪುರಸ್ಕಾರ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.