ADVERTISEMENT

ಮಹಿಳಾ ಪ್ರಾತಿನಿಧ್ಯದ ಕೊರತೆ ನೀಗಿಲ್ಲ: ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 20:04 IST
Last Updated 4 ಜನವರಿ 2023, 20:04 IST
ಎಸ್.ಅಬ್ದುಲ್‌ ನಜೀರ್‌
ಎಸ್.ಅಬ್ದುಲ್‌ ನಜೀರ್‌   

ನವದೆಹಲಿ: ಕರ್ನಾಟಕ ಮೂಲದ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್ ಅವರು ಸುಪ್ರೀಂ ಕೋರ್ಟ್‌ನಿಂದ ಬುಧವಾರ ನಿವೃತ್ತರಾದರು.

‘ನ್ಯಾಯಾಂಗದಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯದ ಕೊರತೆ ಇದೆ ಮತ್ತು ನ್ಯಾಯಾಂಗವು ಲಿಂಗ ಅಸಮಾನತೆಗಳಿಂದ ಮುಕ್ತವಾಗಿದೆ ಎಂದು ಕರೆಯುವುದು ವಾಸ್ತವದಿಂದ ದೂರವಾಗಿತ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ನಜೀರ್, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮಾರ್ಗದರ್ಶನದಲ್ಲಿ ಇಂದಿನ ಕ್ರಿಯಾತ್ಮಕ ಸನ್ನಿವೇಶದ ಸವಾಲುಗಳನ್ನು ಎದುರಿಸಲು ಸುಪ್ರೀಂ ಸಜ್ಜಾಗಿದೆ. ಆದರೆ, ಸುಧಾರಣೆಗೆ ಅವಕಾಶವಿತ್ತು ಎಂದರು.

ADVERTISEMENT

‘ಸುಪ್ರೀಂ ಕೋರ್ಟ್‌ ಯಾವಾಗಲೂ ಉತ್ಕೃಷ್ಟತೆಗಾಗಿ ಶ್ರಮಿಸಿದೆ. ಸುಧಾರಣೆ ಮತ್ತು ಬದಲಾವಣೆಗಳಿಗೆ ಯಾವಾಗಲೂ ಅವಕಾಶವಿದೆ. ಉದಾಹರಣೆಗೆ, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಲಿಂಗ ಅಸಮಾನತೆಗಳಿಂದ ಭಾರತೀಯ ನ್ಯಾಯಾಂಗ ಮುಕ್ತವಾಗಿದೆ ಎಂದು ಹೇಳಿ
ದರೆ, ನಾನು ವಾಸ್ತವದಿಂದ ದೂರ
ವಿರಲು ಸಾಧ್ಯವಿಲ್ಲ. ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಇನ್ನೂ ಕಡಿಮೆ ಇದೆ’ ಎಂದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ‘ನಜೀರ್ ಅವರು ಯಾವಾಗಲೂ ನ್ಯಾಯದ ಪರವಾಗಿದ್ದರು ಹಾಗೂ ಸೂಕ್ತ ನ್ಯಾಯದಾನ ಒದಗಿಸುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು’ ಎಂದರು.

ಹಲವು ಮಹತ್ವದ ತೀರ್ಪು: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ನಜೀರ್‌ ಅವರು ಹಲವು ಮಹತ್ವದ ತೀರ್ಪು
ಗಳನ್ನು ಪ್ರಕಟಿಸಿದ್ದಾರೆ. ರಾಜಕೀಯ ಸೂಕ್ಷ್ಮತೆ ಹೊಂದಿದ್ದ ಅಯೋಧ್ಯೆ ಭೂವಿವಾದ, ತ್ರಿವಳಿ ತಲಾಕ್‌ ಹಾಗೂ ಖಾಸಗಿತನದ ಹಕ್ಕು ಕೂಡ ಮೂಲಭೂತ ಹಕ್ಕು ಎಂದು ಘೋಷಿಸಿದ ತೀರ್ಪು ಸೇರಿದಂತೆ ಹಲವು ಮಹತ್ವದ ಆದೇಶಗಳನ್ನು ಪ್ರಕಟಿಸಿದ್ದಾರೆ.

2018ರ ಫೆಬ್ರುವರಿ 17ರಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ನಜೀರ್ ಅವರು, ಹಲವು ಸಾಂವಿಧಾನದ ಪೀಠಗಳ ಭಾಗವಾಗಿದ್ದರು. ₹500, ₹1000 ನೋಟುಗಳ ಅಮಾನ್ಯೀಕರಣ ಕಾನೂನುಬದ್ಧವಾಗಿದೆ ಎಂದು ತೀರ್ಪು ಕೊಟ್ಟ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಇವರು ಒಬ್ಬರಾಗಿದ್ದರು.

ಬದಲಿ ನಿವೇಶನ ವಾಪಸ್‌ಗೆ ಆದೇಶ

ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಬ್ದುಲ್‌ ನಜೀರ್‌ ನೇತೃತ್ವದ ನ್ಯಾಯಪೀಠ 2021ರ ಅಕ್ಟೋಬರ್‌ 29ರಂದು ಆದೇಶಿಸಿತ್ತು.

ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನಜೀರ್‌ ನೇತೃತ್ವದ ನ್ಯಾಯಪೀಠ, ಈ ಬದಲಿ ನಿವೇಶನಗಳನ್ನು ಕಾನೂನು ಪ್ರಕ್ರಿಯೆಗಳ ಅನುಸಾರ ವಾಪಸ್‌ ಪಡೆಯುವಂತೆ ಪ್ರಾಧಿಕಾರಕ್ಕೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು.

ಈ ಪ್ರಕರಣದಲ್ಲಿ ಪ್ರಾಧಿಕಾರದ ಆಯುಕ್ತರಾಗಿದ್ದ ಎಂ.ಬಿ.ರಾಜೇಶ ಗೌಡ ಹಾಗೂ ಇಬ್ಬರು ಉಪ ಕಾರ್ಯದರ್ಶಿಗಳ ವರ್ಗಾವಣೆಗೂ ನ್ಯಾಯಪೀಠ ಆದೇಶಿಸಿತ್ತು. ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ ಹಲವು ಆದೇಶಗಳನ್ನು ನೀಡಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ 1958ರ ಜನವರಿ 5ರಂದು ಜನಿಸಿದ ನಜೀರ್ ಅವರು, 1983ರ ಫೆಬ್ರುವರಿಯಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು. 2003ರ ಮೇ 12ರಂದು ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ
ಯಾಗಿ ನೇಮಕಗೊಂಡರು. 2004ರ ಸೆಪ್ಟೆಂಬರ್‌ನಲ್ಲಿ ಅವರು ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ
ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.