ADVERTISEMENT

ವಿಭಜನೆಯತ್ತ ಲೋಕಜನಶಕ್ತಿ ಪಕ್ಷ: ಪಾಸ್ವಾನ್ ವಿರುದ್ಧ ಸಿಡಿದೆದ್ದ ಎಲ್‌ಜೆಪಿ ಸಂಸದರು

ಲೋಕಸಭೆಯಲ್ಲಿ ಪಶುಪತಿ ಕುಮಾರ್‌ ಪರಾಸ್‌ ಪಕ್ಷದ ನೂತನ ನಾಯಕ

ಪಿಟಿಐ
Published 14 ಜೂನ್ 2021, 6:56 IST
Last Updated 14 ಜೂನ್ 2021, 6:56 IST
ಚಿರಾಗ್‌ ಪಾಸ್ವಾನ್‌
ಚಿರಾಗ್‌ ಪಾಸ್ವಾನ್‌   

ನವದೆಹಲಿ: ಬಿಹಾರ ರಾಜಕೀಯ ಸೋಮವಾರ ಹೊಸ ತಿರುವು ಪಡೆದಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಮತ್ತೊಂದು ಸಂಕಷ್ಟ ಎದುರಾಗಿದೆ.

ಚಿರಾಗ್‌ ಪಾಸ್ವಾನ್‌ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐವರು ಸಂಸದರು ಸಿಡಿದೆದಿದ್ದಾರೆ. ಈ ಐವರು ಸಂಸದರು ಲೋಕಸಭೆಯಲ್ಲಿ ಚಿರಾಗ್‌ ಪಾಸ್ವಾನ್‌ ಬದಲು ಪಶುಪತಿ ಕುಮಾರ್‌ ಪರಾಸ್‌ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಪರಾಸ್‌ ಅವರನ್ನು ಎಲ್‌ಜೆಪಿ ನಾಯಕನನ್ನಾಗಿ ಆಯ್ಕೆ ಮಾಡಿರುವ ನಿರ್ಧಾರವನ್ನು ಲೋಕಸಭಾ ಸ್ಪೀಕರ್‌ ಅವರಿಗೆ ಐವರು ಸಂಸದರು ಮಾಹಿತಿ ನೀಡಿದ್ದಾರೆ.

ADVERTISEMENT

ಹಾಜಿಪುರ ಸಂಸದರಾಗಿರುವ ಪರಾಸ್‌ ಅವರು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ‘ನಿತೀಶ್‌ ಕುಮಾರ್‌ ಉತ್ತಮ ನಾಯಕ ಮತ್ತು ಒಬ್ಬ ವಿಕಾಸ ಪುರುಷ’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ನಾನು ಪಕ್ಷವನ್ನು ವಿಭಜಿಸುವ ಕಾರ್ಯ ಮಾಡಿಲ್ಲ. ಆದರೆ, ಪಕ್ಷ ಉಳಿಸುವ ಕಾರ್ಯ ಮಾಡಿದ್ದೇನೆ. ಬಿಹಾರದಲ್ಲಿನ ಘಟನೆಗಳ ಬಗ್ಗೆ ಎಲ್‌ಜೆಪಿಯ ಶೇಕಡ 99ರಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ’ ಎಂದು ಹೇಳಿದ್ದಾರೆ.

‘ನಮ್ಮ ಗುಂಪು ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಲಿದೆ. ಪಾಸ್ವಾನ್‌ ಅವರಿಗೆ ಇಚ್ಛೆ ಇದ್ದರೆ ಈ ಸಂಘಟನೆಯ ಭಾಗವಾಗಬಹುದು’ ಎಂದು ಪರಾಸ್‌ ಹೇಳಿದ್ದಾರೆ.

ಸಂಸದರಾದ ಪ್ರಿನ್ಸ್‌ ರಾಜ್‌, ಚಂದನ್‌ ಸಿಂಗ್‌, ವೀನಾ ದೇವಿ ಮತ್ತು ಅಲಿ ಕೈಸರ್‌ ಅವರು ಪಾಸ್ವಾನ್‌ ಅವರ ಕಾರ್ಯವೈಖರಿ ಬಗ್ಗೆ ಹಲವು ದಿನಗಳಿಂದ ಅಸಮಾಧಾನ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

‘ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್ ಪಕ್ಷದ ಉನ್ನತಮಟ್ಟದಲ್ಲಿ ಈಗ ಬಹುತೇಕ ಒಂಟಿಯಾಗಿದ್ದಾರೆ. ಪಕ್ಷ ವಿಭಜನೆಗೆ ಜೆಡಿಯು ಕಾರಣವಾಗಿದೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ ಬಳಿಕ ಪಾಸ್ವಾನ್‌ ಅವರನ್ನು ಏಕಾಂಗಿ ಮಾಡಲು ಜೆಡಿಯು ನಿರಂತರವಾಗಿ ಪ್ರಯತ್ನಿಸುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

2020ರ ಬಿಹಾರ ವಿಧಾನಸಭೆಯಲ್ಲಿ ಎಲ್‌ಜೆಪಿ ಭಾರಿ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.