ADVERTISEMENT

ಆಗ ಆಟೊ ಚಾಲಕ–ಈಗ ಮೇಯರ್!

ಪಿಂಪ್ರಿ–ಚಿಂಚ್‌ವಾಡ ಮೇಯರ್ ಜಾಧವ ಪಯಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 19:29 IST
Last Updated 5 ಆಗಸ್ಟ್ 2018, 19:29 IST
ರಾಹುಲ್‌ ಜಾಧವ
ರಾಹುಲ್‌ ಜಾಧವ   

ಪುಣೆ (ಪಿಟಿಐ): ದಶಕಗಳ ಹಿಂದೆ ಆಟೊ ಓಡಿಸುತ್ತಿದ್ದ ವ್ಯಕ್ತಿ, ರಾಜಕೀಯ ಸೇರಿ ಪಾಲಿಕೆ ಸದಸ್ಯನೂ ಆದ. ಈಗ ಮೇಯರ್‌ ಪಟ್ಟವೂ ಆವರನ್ನು ಹುಡುಕಿಕೊಂಡು ಬಂದಿದೆ.

ಇದು ಮಹಾರಾಷ್ಟ್ರದ ಪ್ರಮುಖ ಕೈಗಾರಿಕಾ ನಗರವಾದ ಪಿಂಪ್ರಿ ಚಿಂಚ್‌ವಾಡದ ನೂತನ ಮೇಯರ್ ರಾಹುಲ್‌ ಜಾಧವ್ ಸಾಗಿ ಬಂದ ಕಥೆ.

128 ಸದಸ್ಯ ಬಲದ ಪಿಂಪ್ರಿಚಿಂಚ್‌ವಾಡ ಪಾಲಿಕೆಯಲ್ಲಿ ಬಿಜೆಪಿ ಆಡಳಿತ. ಈ ಮೊದಲು ಮೇಯರ್‌ ಆಗಿದ್ದ ಬಿಜೆಪಿಯ ನಿತಿನ್‌ ಕಲ್ಜೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕಾಗಿ ಶನಿವಾರ ಚುನಾವಣೆ ನಡೆಯಿತು.ಎನ್‌ಸಿಪಿ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿ ರಾಹುಲ್‌ ಜಾಧವ ಸ್ಪರ್ಧಿಸಿದರು. 81 ಮತಗಳನ್ನು ಪಡೆದ ರಾಹುಲ್‌, ಮೇಯರ್‌ ಆಗಿ ಆಯ್ಕೆಯಾದರು. 8 ಜನ ಪಾಲಿಕೆ ಸದಸ್ಯರು ಮತದಾನದಿಂದ ದೂರ ಉಳಿದರು.

ADVERTISEMENT

36 ವರ್ಷದ ಜಾಧವ ಕೃಷಿ ಕುಟುಂಬಕ್ಕೆ ಸೇರಿದ್ದು, 10ನೇ ತರಗತಿ ವರೆಗೆ ಓದಿದ್ದಾರೆ.

‘ಹೊಟ್ಟೆಪಾಡಿಗಾಗಿ ನಾನು ಆರು ಸೀಟುಗಳ ಆಟೊ ಓಡಿಸುತ್ತಿದ್ದೆ. ರಾಜ್ಯ ಸರ್ಕಾರ ಅಂತಹ ಆಟೊಗಳನ್ನು ನಿಷೇಧಿಸಿದ ಮೇಲೆ ಕೃಷಿಯತ್ತ ಮುಖ ಮಾಡಿದೆ. ಆ ಕೆಲಸವನ್ನೂ ಬಿಟ್ಟು ಖಾಸಗಿ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದೆ’ ಎಂದು ರಾಹುಲ್‌ ಹೇಳುತ್ತಾರೆ.

‘2006ರಲ್ಲಿ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಸೇರಿದೆ. 2012ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾದೆ. 2017ರಲ್ಲಿ ಬಿಜೆಪಿ ಸೇರಿ, ಪುನಃ ಪಾಲಿಕೆ ಸದಸ್ಯನಾಗಿ ಆಯ್ಕೆಯಾದೆ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.