ದರ್ಭಂಗಾ, ಬಿಹಾರ್: ‘ದೇಶದ ಜನರ ಭಯದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ– ಜನಗಣತಿ ನಡೆಸಲು ಒಪ್ಪಿಗೆ ಸೂಚಿಸಿದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿಕೆ ನೀಡಿದ್ದಾರೆ.
ಇಲ್ಲಿನ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಗುರುವಾರ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ‘ನೀವು ತಲೆಯಿಂದ ಸಂವಿಧಾನಕ್ಕೆ ನಮಸ್ಕರಿಸಬೇಕು ಎಂದು ಹೇಳಿದೆವು, ಅದರಂತೆ ನಡೆದುಕೊಂಡರು. ಅದೇ ರೀತಿ, ಜಾತಿ ಜನಗಣತಿ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಎರಡು ಸಂದರ್ಭದಲ್ಲಿ ಜನರ ಭಯದಿಂದ ಅದನ್ನು ಒಪ್ಪಿಕೊಂಡರು’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರವು ಅಂಬಾನಿ, ಅದಾನಿ ಹಿತಗೋಸ್ಕರ ಕೆಲಸ ಮಾಡುತ್ತಿದೆ. ಇಡೀ ವ್ಯವಸ್ಥೆಯು ದೇಶದ ಶೇ5ರಷ್ಟು ಜನರ ಒಳಿತಿಗಷ್ಟೇ ಕೆಲಸ ಮಾಡುತ್ತಿದೆ. ಸರ್ಕಾರ, ಕಾರ್ಪೋರೇಟ್ ಪ‍್ರಪಂಚ ಹಾಗೂ ಮಾಧ್ಯಮಗಳಲ್ಲಿ ದಲಿತರು, ಹಿಂದುಳಿದ ವರ್ಗಗಳಿಗೆ ಯಾವುದೇ ಆದ್ಯತೆ ಸಿಗುತ್ತಿಲ್ಲ’ ಎಂದು ದೂರಿದರು.
ಮೂರು ಬೇಡಿಕೆ ಈಡೇರಿಸಲಿ: ‘ದೇಶದಾದ್ಯಂತ ಪರಿಣಾಮಕಾರಿ ಜಾತಿ ಜನಗಣತಿ, ಖಾಸಗಿ ವಿದ್ಯಾಸಂಸ್ಥೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಗಳ ಉಪ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಯುವ ಸಮುದಾಯವು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಈ ವೇಳೆ ಆಗ್ರಹಿಸಿದರು.
ಸಂವಾದಕ್ಕೆ ತಡೆ: ಮಿಥಿಲಾ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಸಂವಾದ ನಡೆಸಲು ಒಪ್ಪಿಗೆ ಪಡೆದಿದ್ದರು. ಆದರೆ, ಕಾರ್ಯಕ್ರಮಕ್ಕೆ ತೆರಳುವ ವೇಳೆ ವಿ.ವಿಯ ಪ್ರವೇಶ ದ್ವಾರದಲ್ಲಿ ಸ್ಥಳೀಯಾಡಳಿತವು ತಡೆಯೊಡ್ಡಿತು. ಹೀಗಾಗಿ, ಅವರು ಕಾಲ್ನಡಿಗೆಯಲ್ಲಿ ಹಾಸ್ಟೆಲ್‌ಗೆ ತೆರಳಿ, ‘ಶಿಕ್ಷಾ ನ್ಯಾಯ ಸಂವಾದ’ ನಡೆಸಿಕೊಟ್ಟರು.
Highlights - ತೆಲಂಗಾಣ ಮಾದರಿಯಲ್ಲಿ ಜಾತಿ ಜನಗಣತಿ ನಡೆಸಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಲು ಹೋರಾಟ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ
Quote - ತೆಲಂಗಾಣ ಕರ್ನಾಟಕ ಮಾದರಿ ಅಳವಡಿಸಿಕೊಂಡು ಕಾಲಮಿತಿಯಲ್ಲಿ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವುದಾಗಿ ಘೋಷಿಸಬೇಕು ಹರ್ಷವರ್ಧನ್ ಸಪ್ಕಾಲ್ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ
‘ಸಂಪೂರ್ಣ ಸರ್ವಾಧಿಕಾರದ ವರ್ತನೆ’
ನವದೆಹಲಿ (ಪಿಟಿಐ): ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಬಿಹಾರದ ಜೆಡಿಯು–ಬಿಜೆಪಿ ಸರ್ಕಾರ ನಡೆಯು ಸಂಪೂರ್ಣ ಸರ್ವಾಧಿಕಾರದ ವರ್ತನೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಸಂವಿಧಾನಕ್ಕೆ ವಿರುದ್ಧವೇ? ಅವರ ಶಿಕ್ಷಣ ನೇಮಕಾತಿ ಪರೀಕ್ಷೆ ಹಾಗೂ ಉದ್ಯೋಗದ ಬಗ್ಗೆ ಮಾತನಾಡುವುದು ಪಾಪವೇ? ಎಂದು ಪ್ರಶ್ನಿಸಿದ್ದಾರೆ. ‘ಇದು ಬಿಜೆಪಿ–ಜೆಡಿಯು ಸರ್ಕಾರದ ಸರ್ವಾಧಿಕಾರಿ ವರ್ತನೆಯಾಗಿದೆ. ಬಿಹಾರದಲ್ಲಿ ಪ್ರಜಾಪ್ರಭುತ್ವದ ಜನ್ಮಸ್ಥಳದಲ್ಲಿಯೇ ನಡೆದ ಈ ಅನ್ಯಾಯವನ್ನು ನೆನಪಿಸಿಕೊಳ್ಳಲಿದ್ದು ಸಮಯ ಬಂದಾಗ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.