ADVERTISEMENT

ವೈಮಾನಿಕ ದಾಳಿಗೆ ಪುರಾವೆ ಕೇಳಿದ್ದ ಸ್ಯಾಮ್‌ ಪಿತ್ರೋಡಾ ಹೇಳಿಕೆಗೆ ಮೋದಿ ಟೀಕೆ

ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿ ಕುರಿತು ಹೇಳಿಕೆ

ಪಿಟಿಐ
Published 22 ಮಾರ್ಚ್ 2019, 20:27 IST
Last Updated 22 ಮಾರ್ಚ್ 2019, 20:27 IST
   

ನವದೆಹಲಿ: ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ವಾಯುಪಡೆ ನಡೆಸಿದ ದಾಳಿಗೆ ಪುರಾವೆ ಕೇಳಿದ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಹಾಗೂ ರಾಹುಲ್‌ ಗಾಂಧಿ ಅವರ ಆಪ್ತ, ಸ್ಯಾಮ್‌ ಪಿತ್ರೋಡಾ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಟೀಕಾ ಪ್ರಹಾರ ನಡೆಸಿದ್ದಾರೆ.

ಟ್ವೀಟ್‌ ಮೂಲಕ ಪಿತ್ರೋಡಾ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ದಾಳಿಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಮೂಲಕ ಪಿತ್ರೋಡಾ ಅವರು ಕಾಂಗ್ರೆಸ್‌ ಪರವಾಗಿ ‘ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ’ಗೆ ಚಾಲನೆ ನೀಡಿದ್ದಾರೆ. ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತಳೆಯುವುದು ಮತ್ತು ಸೇನೆಯನ್ನು ನಿಂದಿಸುವುದು ಕಾಂಗ್ರೆಸ್‌ನ ಸಹಜ ಸ್ವಭಾವ’ ಎಂದಿದ್ದಾರೆ.

ವಾಗ್ದಾಳಿಗೆ, ‘ಜನತಾ ಮಾಫ್‌ ನಹೀಂ ಕರೇಗಿ’ (ಜನರು ಕ್ಷಮಿಸಲಾರರು) ಎಂಬ ಹ್ಯಾಷ್‌ಟ್ಯಾಗ್‌ ಬಳಸಿದ ಮೋದಿ, ‘ಭಯೋತ್ಪಾದಕರಿಗೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌ ಬಯಸುವುದಿಲ್ಲ ಎಂಬುದು ಜನರಿಗೆ ಯಾವತ್ತೋ ಅರ್ಥವಾಗಿದೆ. ಈಗ ಕಾಂಗ್ರೆಸ್‌ನ ‘ವಿನಮ್ರ ಸೇವಕ’ (ಪಿತ್ರೋಡ) ಅದನ್ನು ಒಪ್ಪಿಕೊಂಡಂತಾಗಿದೆ. ಆದರೆ ಭಾರತ ಈಗ ಬದಲಾಗಿದೆ, ಭಯೋತ್ಪಾದಕರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ನೀಡುತ್ತದೆ’ ಎಂದಿದ್ದಾರೆ.

ADVERTISEMENT

ಪಿತ್ರೋಡಾ ಹೇಳಿಕೆಯು ವಿವಾದ ಸೃಷ್ಟಿಸುತ್ತಿದೆ ಎಂಬುದು ಅರ್ಥವಾಗುತ್ತಿದ್ದಂತೆಯೆ ಕಾಂಗ್ರೆಸ್‌, ‘ಹೇಳಿಕೆಯು ಪಿತ್ರೋಡಾ ಅವರ ವೈಯಕ್ತಿಕ ಅಭಿಪ್ರಾಯವೇ ವಿನಾ ಪಕ್ಷದ ನಿಲುವಲ್ಲ’ ಎಂದು ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಹಿಂದೆ ಪಕ್ಷದ ನಾಯಕರಾದ ಮಣಿಶಂಕರ್‌ ಅಯ್ಯರ್‌ ಹಾಗೂ ದಿಗ್ವಿಜಯ್‌ ಸಿಂಗ್‌ ಅವರೂ ಪಕ್ಷಕ್ಕೆ ಇಂಥ ಮುಜುಗರದ ಸಂದರ್ಭವನ್ನು ಸೃಷ್ಟಿಸಿದ್ದರು.

‘ವಾಯು ದಾಳಿಯ ಹಿಂದೆ ವ್ಯವಸ್ಥಿತ ಸಂಚು ಇದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ರಾಮ್‌ ಗೋಪಾಲ್‌ ಯಾದವ್‌ ವಿರುದ್ಧವೂ ಮೋದಿ ಟೀಕಾ ಪ್ರಹಾರ ಮಾಡಿದ್ದಾರೆ. ಇಬ್ಬರು ನಾಯಕರ ಹೇಳಿಕೆಗಳ ವರದಿಗಳನ್ನು ಅವರು ತಮ್ಮ ಟ್ವೀಟ್‌ ಜೊತೆಗೆ ಟ್ಯಾಗ್‌ ಮಾಡಿದ್ದಾರೆ.

ಪಿತ್ರೋಡಾ ಹೇಳಿದ್ದೇನು?

‘ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ನಡೆದ ಕೂಡಲೇ ಅಂದಿನ ಸರ್ಕಾರವು ಪಾಕಿಸ್ತಾನದ ಮೇಲೆ ವಾಯು ದಾಳಿ ನಡೆಸಬಹುದಾಗಿತ್ತು. ಆದರೆ ಇಂಥ ಘಟನೆಗಳನ್ನು ನಿಭಾಯಿಸುವ ರೀತಿ ಅದಲ್ಲ. ಬಾಲಾಕೋಟ್‌ ವಾಯು ದಾಳಿಯ ಬಗ್ಗೆ ಸರ್ಕಾರ ಇನ್ನಷ್ಟು ಮಾಹಿತಿ ಕೊಡಬೇಕು’ ಎಂದು ಪಿತ್ರೋಡಾ ಒತ್ತಾಯಿಸಿದ್ದರು.

ಕೆಲವು ವಿದೇಶಿ ಮಾಧ್ಯಮಗಳನ್ನು ಉಲ್ಲೇಖಿಸಿದ್ದ ಪಿತ್ರೋಡಾ, ‘ನಾವು ನಿಜವಾಗಿಯೂ ದಾಳಿ ನಡೆಸಿದ್ದೇವೆಯೇ? ನಿಜವಾಗಿಯೂ 300 ಜನರನ್ನು ಕೊಂದಿದ್ದೇವೆಯೇ? ಯಾರೋ ಎಂಟು ಜನರು ಬಂದು ಏನೋ ಮಾಡಿದರೆ, ಇಡೀ ದೇಶದ (ಪಾಕಿಸ್ತಾನದ) ವಿರುದ್ಧ ಆರೋಪ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.

ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ತಮ್ಮ ಹೇಳೀಕೆಗೆ ಸ್ಪಷ್ಟನೆ ನೀಡಿದ ಅವರು, ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಪ್ರಶ್ನೆ ಕೇಳಿದ್ದೇನೆಂದರೆ ನಾನು ಸರ್ಕಾರದ ತೀರ್ಮಾನದ ವಿರುದ್ಧ ಇದ್ದೇನೆ ಎಂದಾಗಲಿ, ಯೋಧರನ್ನು ಬೆಂಬಲಿಸುವುದಿಲ್ಲ ಎಂದಾಗಲಿ ಅರ್ಥವಲ್ಲ. ಸತ್ಯ ತಿಳಿಯಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.

ಪಿತ್ರೋಡಾ ಅವರ ಈ ಹೇಳಿಕೆ ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್‌ ಮೇಲೆ ದಾಳಿ ನಡೆಸಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ನಿರುದ್ಯೋಗ ಮತ್ತು ರೈತರ ಸಮಸ್ಯೆಯ ವಿಚಾರಗಳನ್ನು ಹಿಂದೆ ಸರಿಸಿ, ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತರಲು ಬಿಜೆಪಿಗೆ ಅನುಕೂಲ ಕಲ್ಪಿಸಿದಂತಾಗಿದೆ. ‘ಕಾಂಗ್ರೆಸ್‌ ಪಕ್ಷವು ಭಾರತೀಯ ಸೇನೆಯನ್ನು ಅವಮಾನಿಸಿ, ಪಾಕಿಸ್ತಾನದ ಪರವಾಗಿ ವಾದಿಸುತ್ತಿದೆ’ ಎಂದು ಬಿಜೆಪಿ ಗಟ್ಟಿ ದನಿಯಲ್ಲಿ ಆರೋಪಿಸಿದೆ.

ಯಾರು ಏನು ಹೇಳಿದ್ದಾರೆ?

* ‘ವಿರೋಧ ಪಕ್ಷದವರ ಹೃದಯ ಭಯೋತ್ಪಾದಕರ ಪರ ಮಿಡಿಯುತ್ತಿದ್ದರೆ, ನಮ್ಮ ಹೃದಯ ತ್ರಿವರ್ಣ ಧ್ವಜಕ್ಕಾಗಿ ಮಿಡಿಯುತ್ತಿದೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಸಂಸ್ಕೃತಿಯ ಮೇಲೆ ಸರ್ಜಿಕಲ್‌ ದಾಳಿ ನಡೆಸಬೇಕಾಗಿದೆ’

-ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

* ‘ವಾಯು ದಾಳಿ ನಡೆಸುವ ಮೂಲಕ ಸರ್ಕಾರ ತಪ್ಪೆಸಗಿದೆ ಎಂದು ಪಿತ್ರೋಡಾ ಭಾವಿಸಿದ್ದಾರೆ. ಈ ಹೇಳಿಕೆಯು ಪಾಕಿಸ್ತಾನದ ವಾಹಿನಿಗಳಲ್ಲಿ ಮುಖ್ಯ ಸುದ್ದಿಯಾಗಲಿದೆ. ಇಂಥ ವ್ಯಕ್ತಿ ರಾಜಕೀಯ ಪಕ್ಷವೊಂದರ ಸಿದ್ಧಾಂತಿ ಎಂಬುದೇ ಬೇಸರದ ವಿಚಾರ’

-ಅರುಣ್‌ ಜೇಟ್ಲಿ, ಕೇಂದ್ರದ ಸಚಿವ

*‘ಸೇನೆಯ ತ್ಯಾಗ– ಬಲಿದಾನಗಳು ಪ್ರಶ್ನಾತೀತ. ಆದರೆ ಸರ್ಕಾರವು ‘ನಾನೇ ಸೈನ್ಯ’ ಎಂಬಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆಗಳನ್ನು ಕೇಳುವುದು ರಾಜಕಾರಣಿಯ ಮೂಲಭೂತ ಹಕ್ಕು’

-ಅಖಿಲೇಶ್‌ ಯಾದವ್‌, ಎಸ್‌ಪಿ ಮುಖಂಡ

*‘ಬಿಜೆಪಿಯ ಹಿರಿಯ ನಾಯಕರ ದೊಡ್ಡ ಭ್ರಷ್ಟಾಚಾರ ಹಗರಣವೊಂದು ಬಯಲಾಗಿದ್ದು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ‘ಚೋರ ಚೌಕೀದಾರ’ ಹಳೆಯ ತಂತ್ರವನ್ನು ಅನುಸರಿಸಿದ್ದಾರೆ. ಜನರನ್ನು ಇನ್ನು ಮುರ್ಖರನ್ನಾಗಿಸಲು ಸಾಧ್ಯವಿಲ್ಲ’

-ರಣದೀಪ್‌ ಸುರ್ಜೇವಾಲ, ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.