ADVERTISEMENT

ವಿಚ್ಛೇದನ ಅರ್ಜಿ | ಕೂತು ಮಾತನಾಡಿ, ಬಗೆಹರಿಸಿಕೊಳ್ಳಿ; ದಂಪತಿಗೆ ಸುಪ್ರೀಂ ಕೋರ್ಟ್‌

ಪಿಟಿಐ
Published 26 ಮೇ 2025, 15:49 IST
Last Updated 26 ಮೇ 2025, 15:49 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ನೀವು ಇಂದು ರಾತ್ರಿ ಒಟ್ಟಿಗೆ ಕೂತು ಊಟ ಮಾಡಿ. ನಿಮ್ಮ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಮಾತುಕತೆ ನಡೆಸಿಕೊಂಡು ನೀವೇ ಪರಿಹಾರ ಕಂಡುಕೊಳ್ಳಿ’ ಎಂದು ವಿಚ್ಛೇದನ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ವೇಳೆ ದಂಪತಿಯನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್‌ ಸೋಮವಾರ ಈ ರೀತಿ ಹೇಳಿದೆ.

ಫ್ಯಾಷನ್‌ ಉದ್ಯಮಿ ಮಹಿಳೆಯು ತನ್ನ ಮೂರು ವರ್ಷ ಮಗುವಿನೊಂದಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ಚಂದ್ರ ಶರ್ಮಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದರು.

‘ನಿಮಗೆ ಮೂರು ವರ್ಷದ ಮಗುವಿದೆ. ನಿಮ್ಮಿಬ್ಬರ ಮಧ್ಯೆ ಅದೆಂಥಾ ಅಹಂಕಾರ? ನಮ್ಮ ನ್ಯಾಯಾಲಯದ ಕ್ಯಾಂಟೀನ್‌ ನಿಮಗೆ ಇಷ್ಟವಾಗದೇ ಇರಬಹುದು. ಅದಕ್ಕಾಗಿ ಒಂದು ಕೋಣೆಯನ್ನು ನೀಡುತ್ತೇವೆ. ರಾತ್ರಿ ಕೂತು ಊಟ ಮಾಡಿ. ಮಾತುಕತೆ ನಡೆಸಿ. ಮಾತುಕತೆಯಿಂದ ಎಲ್ಲವೂ ಬಗೆಹರಿಯುತ್ತದೆ’ ಎಂದು ಪೀಠ ಹೇಳಿತು.

ADVERTISEMENT

‘ಹಳೆಯ ಕಹಿ ಘಟನೆಗಳನ್ನು ಮರೆತುಬಿಡಿ. ಭವಿಷ್ಯದ ಕುರಿತು ಯೋಜನೆ ಮಾಡಿ. ನಾಳೆ ಬನ್ನಿ’ ಎಂದಿತು. ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.