ADVERTISEMENT

ಹಣಕಾಸಿನ ಮುಗ್ಗಟ್ಟಿದ್ದರೆ ಉದ್ಧವ್ ಸರ್ಕಾರ ಸಾಲ ಪಡೆಯಲಿ: ಚಂದ್ರಕಾಂತ್‌ ಪಾಟೀಲ್‌

ಪಿಟಿಐ
Published 6 ನವೆಂಬರ್ 2021, 11:00 IST
Last Updated 6 ನವೆಂಬರ್ 2021, 11:00 IST
ಚಂದ್ರಕಾಂತ್‌ ಪಾಟೀಲ್‌
ಚಂದ್ರಕಾಂತ್‌ ಪಾಟೀಲ್‌   

ಪುಣೆ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಶನಿವಾರ ವಾಗ್ದಾಳಿ ನಡೆಸಿದ್ದು, ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಅದು ಸಾಲ ತೆಗೆದುಕೊಳ್ಳಬೇಕು ಎಂದು ಟೀಕಿಸಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಣಕಾಸಿನ ತೊಂದರೆ ಎದುರಿಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಎಂಎಸ್‌ಆರ್‌ಟಿಸಿ) ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ನಿಗಮದ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಎಂಎಸ್‌ಆರ್‌ಟಿಸಿ ನಷ್ಟದಲ್ಲಿ ಇರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇತ್ತು. ಆದರೆ ನಾವು ಅಧಿಕಾರದಲ್ಲಿದ್ದಾಗ ನೌಕರರು ಮುಷ್ಕರ ನಡೆಸಿರಲಿಲ್ಲ’ ಎಂದು ಪಾಟೀಲ್‌ ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರಗಳನ್ನು ಕಡಿಮೆ ಮಾಡಿದೆ. ಹೀಗಾಗಿ, ಪೆಟ್ರೋಲ್‌, ಡೀಸೆಲ್‌ ದರಗಳನ್ನು ಇಳಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ ಜನರಿಗೆ ಇನ್ನೂ ಹೆಚ್ಚಿನ ಸಮಾಧಾನ ತರಬೇಕು ಎಂದು ಆಗ್ರಹಿಸಿದರು.

ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಎಸ್‌ಐಟಿ ತನಿಖೆಗೆ ಒತ್ತಾಯಿಸಿದ್ದಕ್ಕಾಗಿ ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪಾಟೀಲ್‌, ‘ಸ್ವತಃ ಸಚಿವರಾಗಿರುವ ಮಲಿಕ್‌, ಮಾಧ್ಯಮಗಳ ಮೂಲಕ ಏಕೆ ಬೇಡಿಕೆ ಇಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.