ADVERTISEMENT

2047ರ ಹೊತ್ತಿಗೆ ಭಾರತ ವಿಶ್ವಗುರುವಾಗಲಿದೆ: ಮುರ್ಮು ವಿಶ್ವಾಸ

ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ದಿನಾಚರಣೆ ಕಾರ್ಯಕ್ರಮ

ಪಿಟಿಐ
Published 4 ಡಿಸೆಂಬರ್ 2022, 18:41 IST
Last Updated 4 ಡಿಸೆಂಬರ್ 2022, 18:41 IST
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು   

ವಿಶಾಖಪಟ್ಟಣ: ‘2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುತ್ತಿರುವ ವೇಳೆಗೆ ದೇಶವು ವಿಶ್ವ ಗುರುವಾಗಿ ಹೊರಹೊಮ್ಮಿರುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದರು.

ರಾಮಕೃಷ್ಣ ಬೀಚ್‌ನಲ್ಲಿ ಹಮ್ಮಿಕೊಂಡಿದ್ದ ನೌಕಾಪಡೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಗೀತ, ಕ್ರೀಡೆ, ಸಂಸ್ಕೃತಿ ಹಾಗೂ ಸೇನೆಯ ಸಾಮರ್ಥ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯರು ಅಗಾಧ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸಾಧನೆ ಮಾಡಿದ್ದಾರೆ. ಈ ಕಾರಣಗಳಿಂದಾಗಿಯೇ ಭಾರತ ಅಗ್ರಗಣ್ಯ ದೇಶವಾಗಿ ಹೊರಹೊಮ್ಮಿದೆ’ ಎಂದು ಹೇಳಿದರು.

ADVERTISEMENT

‘ಇಷ್ಟೊಂದು ಸಾಧನೆ ಮಾಡಿದ್ದರೂ, ಕೆಲ ವಿಷಯಗಳಲ್ಲಿ ಏರ್ಪಟ್ಟಿರುವ ಕಂದಕಗಳನ್ನು ತೆಗೆದುಹಾಕಬೇಕಾಗಿದೆ. ಈ ಧ್ಯೇಯದೊಂದಿಗೆ ದೇಶದ ಪ್ರತಿಯೊಬ್ಬ ಪ್ರಜೆ ಮುನ್ನಡೆಯಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಿದ, ನವಭಾರತ ನಿರ್ಮಾಣವಾಗಲಿದೆ’ ಎಂದರು.

‘ದೇಶದ ಅಭಿವೃದ್ಧಿಯಲ್ಲಿ ಸಾಗರಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ, ಕಡಲ ಗಡಿಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ನೌಕಾಪಡೆ ಮೇಲಿದೆ’ ಎಂದು ಹೇಳಿದರು.

‘ಭಾರತದ ನೌಕಾಪಡೆಗೆ ಆತ್ಮನಿರ್ಭರತೆಯೇ ಚಾಲನಾ ಶಕ್ತಿ. ಹೊಸ ಹಾಗೂ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವ ಕನಸನ್ನು ನನಸು ಮಾಡುವುದಕ್ಕೆ ಅಗತ್ಯವಿರುವ ಶಕ್ತಿ–ಸಾಮರ್ಥ್ಯದೊಂದಿಗೆ ನೌಕಾಪಡೆಯೂ ಹೆಜ್ಜೆ ಹಾಕುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಮೂರು ಸೇನಾಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿ ಮುರ್ಮು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.