ADVERTISEMENT

ಭಂಡಾರ ಆಸ್ಪತ್ರೆ ದುರಂತ: 10 ಶಿಶುಗಳ ಸಾವು

ಪಿಟಿಐ
Published 9 ಜನವರಿ 2021, 19:29 IST
Last Updated 9 ಜನವರಿ 2021, 19:29 IST
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ   

ಭಂಡಾರ, ಮಹಾರಾಷ್ಟ್ರ: ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಶನಿವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು ಮೃತಪಟ್ಟಿವೆ. ಏಳು ಶಿಶುಗಳನ್ನು ರಕ್ಷಣೆ ಮಾಡಲಾಗಿದೆ.

ಮೃತಪಟ್ಟ ಶಿಶುಗಳು ಒಂದು ತಿಂಗಳಿನಿಂದ 3 ತಿಂಗಳ ವಯೋಮಾನದವು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

‘ಪ್ರಾಥಮಿಕ ಮಾಹಿತಿ ಪ್ರಕಾರ, ಮೂರು ಶಿಶುಗಳು ಸುಟ್ಟಗಾಯಗಳಿಂದ ಹಾಗೂ ಏಳು ಶಿಶುಗಳು ಉಸಿರುಗಟ್ಟಿ ಸಾವನ್ನಪ್ಪಿವೆ’ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ತೋಪೆ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ADVERTISEMENT

ಮೃತ ಶಿಶುಗಳ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದೂ ತೋಪೆ ಹೇಳಿದ್ದಾರೆ. ಈ ದುರಂತ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅವಘಡ ಕುರಿತು ತನಿಖೆಗೆ ಆದೇಶಿಸಿದ್ದಾರೆ.

‘ಆಸ್ಪತ್ರೆಯ ನವಜಾತ ವಿಶೇಷ ನಿಗಾ ಘಟಕದಲ್ಲಿ 17 ಶಿಶುಗಳನ್ನು ದಾಖಲಿಸಲಾಗಿತ್ತು. ಶುಕ್ರವಾರ ಮಧ್ಯ ರಾತ್ರಿ 1.30ರ ವೇಳೆಗೆ ಈ ಘಟಕದಲ್ಲಿ ದಿಢೀರ್‌ನೆ ಬೆಂಕಿ ಕಾಣಿಸಿಕೊಂಡು, ನಂತರ ವ್ಯಾಪಿಸಿತು’ ಎಂದು ಜಿಲ್ಲಾ ಸರ್ಜನ್‌ ಡಾ.ಪ್ರಮೋದ್‌ ಖಂದಾತೆ ತಿಳಿಸಿದರು. ‘ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದಿಲ್ಲ. ಶಾರ್ಟ್‌ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರಬಹುದು’ ಎಂದು ಅಭಿಪ್ರಾಯಪಟ್ಟರು.

ದುರಂತಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ 48 ಗಂಟೆಗಳೊಳಗೆ ವರದಿ ಸಲ್ಲಿಸುವಂತೆ ಭಂಡಾರ ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಶನಿವಾರ ಸೂಚಿಸಿದೆ.

‘ಭಂಡಾರ ಆಸ್ಪತ್ರೆ ದುರಂತದ ಬಗ್ಗೆ ತನಿಖೆ ಕೈಗೊಳ್ಳಬೇಕು. ಅಲ್ಲದೆ 48 ಗಂಟೆಗಳೊಳಗೆ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ಎನ್‌ಸಿಪಿಸಿಆರ್‌ ಪತ್ರದಲ್ಲಿ ಹೇಳಿದೆ.

ತನಿಖೆಗೆ ಆದೇಶ: ‘ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್‌ ಸರ್ಕಿಟ್‌ ಅಥವಾ ಏರ್‌ ಕಂಡಿಷನ್ ಯಂತ್ರದಲ್ಲಿನ ದೋಷ ಕಾರಣವೇ ಎಂಬುದನ್ನು ನ್ಯಾಷನಲ್‌ ಫೈರ್‌ ಸರ್ವೀಸ್‌ ಕಾಲೇಜ್ (ಎನ್‌ಎಫ್‌ಎಸ್‌ಸಿ) ಹಾಗೂ ನಾಗಪುರದ ವಿಶ್ವೇಶ್ವರಯ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ವಿಎನ್‌ಐಟಿ) ತಜ್ಞರು ಪತ್ತೆ ಹಚ್ಚುವರು’ ಎಂದು ಗೃಹ ಸಚಿವ ಅನಿಲ್‌ ದೇಶಮುಖ್‌ ಹೇಳಿದರು.

ಶಿಶುಗಳಿಗೆ ಜೀವದಾನವಾದ ಕಾರ್ಯಾಚರಣೆ

ನಾಗಪುರ: ಮಹಾರಾಷ್ಟ್ರದ ಭಂಡಾರ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ಅಗ್ನಿ ಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ, ಶ್ರಮದ ಫಲವಾಗಿ ಏಳು ಶಿಶುಗಳಿಗೆ ಜೀವದಾನ ಸಿಕ್ಕಿತು. ದುರಾದೃಷ್ಟವೆಂದರೆ, 10 ಶಿಶುಗಳನ್ನು ಬದುಕಿಸಲು ಆಗಲಿಲ್ಲ!

‘ನವಜಾತ ಶಿಶುಗಳ ಘಟಕದಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ನರ್ಸ್‌ವೊಬ್ಬರು ಮೊದಲು ನೋಡಿದ್ದಾರೆ. ಕೂಡಲೇ, ಈ ಬಗ್ಗೆ ವೈದ್ಯರು ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಗೆ ಅವರು ಮಾಹಿತಿಯನ್ನು ನೀಡಿದರು’ ಎಂದು ಆಸ್ಪತ್ರೆಯ ಡಾ.ಪ್ರಮೋದ್‌ ಹೇಳಿದರು.

‘ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಿದರಲ್ಲದೇ 7 ಶಿಶುಗಳನ್ನು ರಕ್ಷಿಸಿದರು. ಉಳಿದ 10 ಶಿಶುಗಳನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.